ಚಕ್ಕವತ್ತಿ ಸುತ್ತ

ತನಗೆ ತಾನೆ ದ್ವೀಪವಾಗಿ ಶರಣು ಹೋಗುವುದು

ಹೀಗೇ ಕೇಳಿದ್ದೇನೆ; ಒಮ್ಮೆ ಭಗವಾನರು ಮಗಧದಲ್ಲಿನ ಮಾತುಲದಲ್ಲಿ ತಂಗಿದ್ದರು. ಆಗ ಅವರು ಭಿಕ್ಷುಗಳನ್ನು ಕರೆದರು. ಅವರು ‘ಭದಂತೆ ಬರುತ್ತೇವೆ’ ಎಂದು ಹೇಳಿ ಅವರಲ್ಲಿಗೆ ಹೋದರು. ಭಗವಾನರು ಅವರನ್ನು ಕುರಿತು ಇಂತೆಂದರು- “ಭಿಕ್ಷುಗಳೇ, ನಿಮಗೆ ನೀವೇ ದ್ವೀಪವಾಗಿ ನಿಮಗೆ ನೀವೇ ಶರಣು ಹೋಗಿ, ಅನ್ಯಕ್ಕೆ ಶರಣಾಗುವುದು ಬೇಡ. ಧಮ್ಮವೇ ನಿಮಗೆ ದ್ವೀಪವಾಗಲಿ, ಧಮ್ಮಕ್ಕೆ ಶರಣು ಹೋಗಿ, ಅನ್ಯಕ್ಕೆ ಬೇಡ. ಭಿಕ್ಷುವು ತನಗೆ ತಾನೇ ದ್ವೀಪವಾಗುವುದು, ಶರಣಾಗುವುದು ಧಮ್ಮಕ್ಕೆ ಶರಣಾಗುವುದು ಅನ್ಯಕ್ಕೆ ಶರಣಾಗದೇ ನಡೆದುಕೊಳ್ಳುವುದು ಹೇಗೆ? ಅಂಥ ಭಿಕ್ಷುವು ಕಾಯವನ್ನು ಅದರ ನಿಜಸ್ವರೂಪದಲ್ಲಿ ನೋಡುತ್ತಾನೆ. ಲೋಕದ ಬಗೆಗಿರುವ ತೀವ್ರ ಆಸೆಯನ್ನು ತೊರೆದು ದೋಮನಸ್ಸನ್ನು ತೊರೆದು ವೇದನೆಯನ್ನು ಅದರ ನಿಜಸ್ವರೂಪದಲ್ಲಿಯೇ ನೋಡಬಲ್ಲವನಾಗುತ್ತಾನೆ. ಶ್ರದ್ಧೆಯಿಂದ ಕೂಡಿರುತ್ತಾನೆ. ಎಚ್ಚರಿಕೆಯನ್ನು ಪಾಲಿಸುತ್ತಿರುತ್ತಾನೆ. ಮನಸ್ಸಿನ ಮೇಲೆ ಸಂಪೂರ್ಣ ಹತೋಟಿಯನ್ನು ಹೊಂದಿರುತ್ತಾನೆ... ಚಿತ್ತವನ್ನು ಅದರ ನಿಜಸ್ವರೂಪದಲ್ಲಿ... ಧಮ್ಮವನ್ನು ಅದರ ನಿಜಸ್ವರೂಪದಲ್ಲಿಯೇ ನೋಡಬಲ್ಲವನಾಗಿರುತ್ತಾನೆ. ಶ್ರದ್ಧೆಯಿಂದ ಕೂಡಿರುತ್ತಾನೆ. ಎಚ್ಚರಿಕೆಯನ್ನು ಪಾಲಿಸುತ್ತಿರುತ್ತಾನೆ. ಮನಸ್ಸಿನ ಮೇಲೆ ಸಂಪೂರ್ಣ ಹತೋಟಿ ಹೊಂದಿರುತ್ತಾನೆ. ಲೋಕದ ಮೇಲಿನ ತೀವ್ರ ಆಸೆಯನ್ನೂ, ದೋಮನಸ್ಸನ್ನೂ ತ್ಯಜಿಸಿರುತ್ತಾನೆ.

ಹೀಗೆ ಆ ಭಿಕ್ಷುವು ತನಗೇ ತಾನೇ ದ್ವೀಪವಾಗಿ ತನಗೇ ಶರಣು ಹೋಗುವವನಾಗಿ ಧಮ್ಮವನ್ನೇ ದ್ವೀಪವನ್ನಾಗಿ ಮಾಡಿಕೊಂಡು ಅವಕ್ಕೆ ಶರಣಾಗದೆ ಇರುತ್ತಾನೆ.

“ಭಿಕ್ಷುಗಳೇ, ನಿಮ್ಮ ಹಸುಗಳು ಮೇಯುವ ಕಡೆಗಳಲ್ಲೇ ಸಂಚರಿಸುವವರಾಗಿ. ನಿಮ್ಮ ಹಿರಿಯರು ನಡೆದುಕೊಂಡ ರೀತಿಯಲ್ಲಿಯೇ ನಡೆದುಕೊಂಡು ಹೋಗಿ. ಆಗ ಮಾರನು ನಿಮ್ಮನ್ನು ಪೀಡಿಸಲಾರ, ನಿಮ್ಮ ಕಡೆ ಸುಳಿಯಲಾರ. ಕುಶಲ ಧಮ್ಮಗಳನ್ನು ಹೀಗೆ ಪಾಲಿಸುವುದರಿಂದ ಪುಣ್ಯವು ವರ್ಧಿಸುತ್ತದೆ.

ಚಕ್ರವರ್ತಿ ದಳ್ಹನೇಮಿ

“ಹಿಂದಿನ ಕಾಲದಲ್ಲಿ ದಳ್ಹನೇಮಿ ಎಂಬ ಚಕ್ರವರ್ತಿ ಇದ್ದನು. ಆತನು ಧಾರ್ಮಿಕನೂ, ಧರ್ಮರಾಜನೂ, ನಾಲ್ಕು ದಿಕ್ಕುಗಳನ್ನು ಗೆದ್ದವನೂ, ಜನಪದಗಳನ್ನು ರಕ್ಷಿಸಬಲ್ಲವನೂ, ಸಪ್ತರತ್ನಗಳ ಒಡೆಯನೂ ಆಗಿದ್ದನು. ಚಕ್ರರತ್ನ, ಹಸ್ತಿರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ, ಗೃಹಪತಿ ರತ್ನ ಮತ್ತು ಪರಿಣಾಯಕ ರತ್ನವೆಂಬ ಏಳು ರತ್ನಗಳು ಅವನಿಗಿದ್ದುವು. ಶೂರರೂ, ವೀರರೂ, ಶತ್ರು ಗುಂಪುಗಳನ್ನು ಗೆಲ್ಲಬಲ್ಲವರೂ ಆದ ಸಾವಿರಕ್ಕೂ ಹೆಚ್ಚಾದ ಪುತ್ರರು ಅವನಿಗಿದ್ದರು. ಆತನು ಸಾಗರದವರೆಗೆ ಹರಡಿರುವ ಈ ಪೃಥ್ವಿಯನ್ನು ದಂಡ ಶಸ್ತ್ರಗಳಿಲ್ಲದೆ ಕೇವಲ ಧರ್ಮದಿಂದಲೇ ಗೆದ್ದಿದ್ದನು.

“ಭಿಕ್ಷುಗಳೇ, ರಾಜ ದಲ್ಹನೇಮಿಯು ಅನೇಕ ವರ್ಷಗಳ ನಂತರ ಅನೇಕ ಶತವರ್ಷಗಳ ನಂತರ ಅನೇಕ ಸಹಸ್ರ ವರ್ಷಗಳ ನಂತರ ಒಬ್ಬ ದೂತನನ್ನು ಕರೆದು- ‘ಅಯ್ಯಾ, ದಿವ್ಯವಾದ ಈ ಚಕ್ರರತ್ನವು ತನ್ನ ಸ್ಥಾನದಿಂದ ಚ್ಯುತಿ ಹೊಂದಿರುವದನ್ನು ತನ್ನ ಸ್ಥಾನದಿಂದ ಕುಗ್ಗಿರುವುದನ್ನು ನೋಡುತ್ತಿರುವೆ ಏನು? ತಿಳಿಸು’ ಎಂದನು. ಆಗ ಆ ದೂತನು- ‘ದೇವ, ಹಾಗೆಯೇ ಆಗಲಿ’ ಎಂದು ಪ್ರತ್ಯುತ್ತರವಿತ್ತು. ಮತ್ತೆ ಅನೇಕ ವರ್ಷಗಳ ನಂತರ, ಅನೇಕ ಶತವರ್ಷಗಳ ನಂತರ, ಅನೇಕ ಸಹಸ್ರ ವರ್ಷಗಳ ನಂತರ ಆ ದಿವ್ಯವಾದ ಚಕ್ರರತ್ನವು ತನ್ನ ಹಿಂದಿನ ಸ್ಥಾನದಿಂದ ಚ್ಯುತವಾಗಿರುವುದನ್ನು ಕುಗ್ಗಿರುವುದನ್ನು ಕಂಡನು. ಹಾಗೆ ನೋಡಿ ಮೇಲೆ ರಾಜನ ಬಳಿಗೆ ಬಂದು- ‘ದೇವ, ದಿವ್ಯ ಚಕ್ರರತ್ನವು ತನ್ನ ಸ್ಥಾನದಿಂದ ಚ್ಯುತಿ ಹೊಂದಿದೆ, ನಿಮ್ಮ ಗಮನಕ್ಕೆ ತಂದಿದ್ದೇನೆ’ ಎಂದು ಹೇಳಿದನು. ಆಗ ರಾಜ ದಲ್ಹನೇಮಿಯು ತನ್ನ ಜೇಷ್ಠ ಪುತ್ರನನ್ನು ಕರೆದು ‘ಕುಮಾರ, ನನ್ನ ಈ ದಿವ್ಯ ಚಕ್ರರತ್ನವು ಸ್ಥಾನಪಲ್ಲಟವಾಗಿದೆ, ತನ್ನ ಸ್ಥಾನದಿಂದ ಕುಗ್ಗಿದೆ. ನಾನು ಕೇಳಿರುವಂತೆ, ಚಕ್ರವರ್ತಿಯ ದಿವ್ಯರತ್ನವು ಹೀಗೆ ಸ್ಥಾನದಿಂದ ಚ್ಯುತಿಯಾದಾಗ ಕುಗ್ಗಿದಾಗ ಅವನು ಬಹುದಿನ ಬದುಕುವುದಿಲ್ಲ. ನಾನು ಮನುಷ್ಯರು ಅನುಭವಿಸುವ ಭೋಗವನ್ನು ಅನುಭವಿಸಿದ್ದೇನೆ. ದಿವ್ಯವಾದುದನ್ನು ಹುಡುಕುವುದಕ್ಕೆ ಇದು ತಕ್ಕ ಸಮಯ. ಕುಮಾರ, ಸಮುದ್ರ ಪರ್ಯಂತ ಹರಡಿರುವ ಈ ಪೃಥ್ವಿಯನ್ನು ಪರಿಪಾಲಿಸು. ಗಡ್ಡ-ಕೂದಲುಗಳೂ ತೆಗೆದು ಕಾಷಾಯ ವಸ್ತ್ರವನ್ನು ಧರಿಸಿ ಮನೆಯನ್ನು ತೊರೆದು ಪಬ್ಬಜಿತನಾಗುತ್ತೇನೆ’ ಎಂದು ಹೇಳಿದನು.

ಭಿಕ್ಷುಗಳೇ, ರಾಜ ದಲ್ಹನೇಮಿಯು ತನ್ನ ಜೇಷ್ಠ ಪುತ್ರನನ್ನು ರಾಜನನ್ನಾಗಿ ಮಾಡಿ ಗಡ್ಡ ಕೂದಲುಗಳನ್ನು ತೆಗೆದು ಕಾಷಾಯ ವಸ್ತ್ರವನ್ನು ಧರಿಸಿ ಪಬ್ಬಜ್ಜನಾದನು. ಹೀಗೆ ಪಬ್ಬಜಿತನಾದ ಏಳು ದಿನಗಳ ನಂತರ ಆ ಚಕ್ರರತ್ನವು ಅಂತರ್ಧಾನವಾಯಿತು.

“ಭಿಕ್ಷುಗಳೇ, ಆಗ ಒಬ್ಬನು ಮೂರ್ಧ್ವಾಭಿಷಕ್ತನಾದ ಆ ಕ್ಷತ್ರಿಯ ರಾಜನ ಬಳಿಗೆ ಬಂದನು. ಅವನನ್ನು ಕುರಿತು- ‘ದಿವ್ಯವಾದ ಚಕ್ರರತ್ನವು ಅಂತರ್ಧಾನವಾಗಿರುವುದು ನಿನಗೆ ತಿಳಿದಿದೆಯಷ್ಟೆ’ ಎಂದು ಕೇಳಿದನು. ಆ ಮೂರ್ಧ್ವಾಭಿಷಕ್ತ ಕ್ಷತ್ರಿಯನು ದಿವ್ಯವಾದ ಚಕ್ರರತ್ನವು ಅಂತರ್ಧಾನವಾಗಿರುವುದನ್ನು ತಿಳಿದು ಅಸಂತೋಷಗೊಂಡನು, ದುಃಖತಪ್ತನಾದನು. ಆಗ ಆತನು ರಾಜರ್ಷಿಯ ಬಳಿಗೆ ಹೋಗಿ- ‘ದೇವ, ದಿವ್ಯವಾದ ಚಕ್ರರತ್ನವು ಅಂತರ್ಧಾನವಾಗಿ ಹೋಗಿದೆ, ನಿಮಗೆ ತಿಳಿಸುತ್ತಿದ್ದೇನೆ’ ಎಂದನು. ಇದನ್ನು ಕೇಳಿದ ರಾಜರ್ಷಿಯು ಕ್ಷತ್ರಿಯ ರಾಜನನ್ನು ಕುರಿತು ಇಂತೆಂದನು- ‘ಮಗೂ, ದಿವ್ಯವಾದ ಚಕ್ರರತ್ನವು ಅಂತರ್ಧಾನವಾಯಿತೆಂದು ಅಸಂತೋಷಪಡಬೇಡ, ದುಃಖಪಡಬೇಡ. ಆ ಚಕ್ರರತ್ನವು ನಿನ್ನ ಪಿತನಿಂದ ನಿನಗೆ ಬರಬೇಕಾದ ಆಸ್ತಿ ಎಂದು ತಿಳಿಯಬೇಡ. ನೀನೇ ಶ್ರೇಷ್ಠನಾದ ಚಕ್ರವರ್ತಿಯಾಗು. ನೀನು ಶ್ರೇಷ್ಠನಾದ ಚಕ್ರವರ್ತಿಯಾಗಿ ಹುಣ್ಣಿಮೆಯ ಉಪೋಸಥ ದಿನ ಪ್ರಾಸಾದದ ಉಪ್ಪರಿಗೆಯನ್ನೇರಿದರೆ ಭವ್ಯವಾದ ಚಕ್ರರತ್ನವು ಪ್ರಾತುರ್ಭವಿಸುವುದನ್ನು ಕಾಣುವೆ. ಸಾವಿರ ಅರೆಗಳೂ, ನೇಮಿಯೂ, ನಾಭಿಯೂ ಇದ್ದು ಸರ್ವಸುಂದರವಾಗಿರುವ ಚಕ್ರರತ್ನವನ್ನು ನೀನು ಕಾಣುವೆ.’

ಚಕ್ರವರ್ತಿಯ ಉನ್ನತ ನಡವಳಿಕೆ

‘ದೇವ, ಶ್ರೇಷ್ಠನಾದ ಚಕ್ರವರ್ತಿಯು ಹೇಗೆ ನಡೆದುಕೊಳ್ಳುತ್ತಾನೆ?’

‘ಮಗೂ ಧರ್ಮವನ್ನೇ ಅವಲಂಬಿಸಿ, ಧಮ್ಮವನ್ನು ಸತ್ಕರಿಸಿ, ಧಮ್ಮವನ್ನು ಗೌರವಿಸಿ ಧಮ್ಮವನ್ನು ಪೂಜಿಸಿ, ಧಮ್ಮವನ್ನು ಕಾಂತಿಯುಕ್ತವಾಗಿ ಮಾಡಿ ಧಮ್ಮಧ್ವಜನಾಗು, ಧಮ್ಮಕೇತುವಾಗು. ಧಮ್ಮವೇ ನಿನಗೆ ಅಧಿಪತ್ಯವಾಗಿರಲಿ. ಧಮ್ಮಕ್ಕೆ ಒಳ್ಳೆಯ ಆವರಣವನ್ನೊದಗಿಸುವವನಾಗು. ನಿನ್ನ ರಾಜ್ಯದ ಜನರೆಲ್ಲರಿಗೆ, ಸೈನ್ಯಕ್ಕೆ, ಕ್ಷತ್ರಿಯರಿಗೆ, ಕೆಲಸಗಾರರಿಗೆ, ಬ್ರಾಹ್ಮಣ ಗೃಹಪತಿಗಳಿಗೆ, ಪಟ್ಟಣ ಹಳ್ಳಿಗಳಲ್ಲಿರುವವರಿಗೆ, ಸಮಣ ಬ್ರಾಹ್ಮಣರಿಗೆ, ಮೃಗಪಕ್ಷಿಗಳಿಗೆ ರಕ್ಷಣೆಯನ್ನು ನೀಡು.

‘ಮಗೂ, ಅಧರ್ಮದಲ್ಲಿ ತೊಡಗಬೇಡ. ಧನವಿಲ್ಲದವರಿಗೆ ಧನವನ್ನೊದಗಿಸು. ಮದ ದುರಭಿಮಾನಗಳನ್ನು ತೊರೆದು ಕ್ಷಾಂತಿ ಅನುಕಂಪಗಳನ್ನು ಬೆಳೆಸಿಕೊಂಡು ದಮ ಶಮಗಳಿಂದ ಎಲ್ಲ ದೋಷಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಸಮಣ ಬ್ರಾಹ್ಮಣರ ಬಳಿಗೆ ಕಾಲ ಕಾಲಕ್ಕೆ ಹೋಗಿ ‘ಭಂತೆ ಕುಶಲವಾವುದು, ಅಕುಶಲ ಯಾವುದು, ಒಳ್ಳೆಯ ವಿದ್ಯೆ ಯಾವುದು, ಕೆಟ್ಟ ವಿದ್ಯೆಯು ಯಾವುದು, ಯಾವುದನ್ನು ಬೆಳೆಸಿಕೊಳ್ಳಬೇಕು, ಯಾವುದನ್ನು ಬಿಡಬೇಕು (ಜನರ) ಹಿತಸುಖಗಳಿಗಾಗಿ ಯಾವುದನ್ನು ಬಹುಕಾಲ ಮಾಡಬೇಕು’ ಎಂದು ಕೇಳುವವನಾಗು. ಅಂಥವರಿಗೆ ಅಕುಶಲವಾಗದಂತೆ ನೋಡಿಕೋ. ಕುಶಲವಾಗುವಂತೆ ನಡೆದುಕೋ. ಶ್ರೇಷ್ಠನಾದ ಚಕ್ರವರ್ತಿಯಾಗುವುದು ಹೀಗೆ ಮಗೂ.’

ಚಕ್ರರತ್ನದ ಉದಯ

‘ಹಾಗೆಯೇ ಆಗಲಿ ದೇವ’ ಎಂದು ಮೂರ್ಧ್ವಾಭಿಷಕ್ತನಾದ ಕ್ಷತ್ರಿಯನು ರಾಜರ್ಷಿಗೆ ಹೇಳಿ ಶ್ರೇಷ್ಠನಾದ ಚಕ್ರವರ್ತಿಯಾದನು. ಹೀಗೆ ಆತನು ಚಕ್ರವರ್ತಿ ಶ್ರೇಷ್ಠನಾಗಿ ಒಂದು ಹುಣ್ಣಿಮೆಯ ರಾತ್ರಿ ಅಭ್ಯಂಜನ ಮಾಡಿ ಉಪೋಸಥವನ್ನು ಆಚರಿಸಲು ಪ್ರಾಸಾದದ ಉಪ್ಪರಿಗೆಯನ್ನೇರಿದನು. ಆಗ ಸಹಸ್ರ ಅರೆಗಳನ್ನುಳ್ಳ ನೇಮಿ ನಾಭಿಗಳನ್ನುಳ್ಳ ಸರ್ವ ಸುಂದರವಾದ ದಿವ್ಯವಾದ ಚಕ್ರರತ್ನವು ಪ್ರಾತುರ್ಭವಿಸಿತು. ಇದನ್ನು ಕಂಡ ಚಕ್ರವರ್ತಿಯು ‘ಮೂರ್ಧ್ವಾಭಿಷಕ್ತನಾದ ಯಾವ ಕ್ಷತ್ರಿಯ ರಾಜನು ಅಭ್ಯಂಜನ ಮಾಡಿ ಉಪೋಸಥದ ದಿನ ತನ್ನ ಪ್ರಾಸಾದದ ಉಪ್ಪರಿಗೆಯನ್ನೇರಿದಾಗ ಅದರಲ್ಲಿ ಸಹಸ್ರ ಅರೆಗಳನ್ನುಳ್ಳ ನೇಮಿ ನಾಭಿಗಳಿಂದ ಪೂರ್ಣವಾದ ಸರ್ವಾಂಗ ಸುಂದರವಾದ ದಿವ್ಯ ಚಕ್ರರತ್ನ ಉದಯಿಸುತ್ತದೋ ಅವನು ಚಕ್ರವರ್ತಿ ರಾಜನಾಗುತ್ತಾನೆ ಎಂದು ಕೇಳಿದ್ದೇನೆ. ನಾನು ಹಾಗೆಯೇ ಆಗಬಹುದಲ್ಲವೇ’ ಎಂದುಕೊಂಡನು.

“ಆನಂತರ ಭಿಕ್ಷುಗಳೇ, ಆ ಚಕ್ರರತ್ನವು ಪೂರ್ವ ದಿಕ್ಕಿನಲ್ಲಿ ಚಲಿಸಿತು. ಚಕ್ರವರ್ತಿಯು ಚತುರಂಗ ಬಲದೊಡನೆ ಅದನ್ನು ಹಿಂಬಾಲಿಸಿದನು. ಚಕ್ರರತ್ನವು ಯಾವ ಯಾವ ಪ್ರದೇಶಗಳಲ್ಲಿ ನಿಂತಿತೋ ಆ ಪ್ರದೇಶಗಳಲ್ಲಿ ಚಕ್ರವರ್ತಿಯು ಚತುರಂಗ ಸೇನೆಯೊಡನೆ ಬೀಡುಬಿಟ್ಟನು. ಆಗ ಪೂರ್ವ ದಿಕ್ಕಿನ ಪ್ರತಿ ರಾಜರೆಲ್ಲಾ ಚಕ್ರವರ್ತಿಯನ್ನು ಸಮೀಪಿಸಿ ಇಂತೆಂದರು- ‘ಬನ್ನಿ ಮಹಾರಾಜ, ನಿಮಗೆ ಸ್ವಾಗತ. ಮಹಾರಾಜ, ಎಲ್ಲವೂ ನಿಮ್ಮದೇ, ನೀವೇ ಅನುಶಾಸನ ಮಾಡಿ’. ಆಗ ಚಕ್ರವತಿಯು ಅವರನ್ನು ಕುರಿತು ಇಂತೆಂದನು- ‘ಪ್ರಾಣಿ ಹಿಂಸೆಯನ್ನು ಮಾಡಬೇಡಿ, ನಿಮಗೆ ಸೇರದುದನ್ನು ಸ್ವೀಕರಿಸಬೇಡಿ, ದುಷ್ಟವಾದ ಕಾಮಗಳಲ್ಲಿ ತೊಡಗಬೇಡಿ, ಸುಳ್ಳನ್ನು ನುಡಿಯಬೇಡಿ, ಮದ್ಯವನ್ನು ಸೇವಿಸಬೇಡಿ. ಉಚಿತ ರೀತಿಯಲ್ಲಿ ನಿಮ್ಮ ಸಂಪತ್ತನ್ನು ಅನುಭೋಗಿಸಿ’. ಭಿಕ್ಷುಗಳೇ, ಹೀಗೆ ಪೂರ್ವ ಸೀಮೆಯ ಪ್ರತಿ ರಾಜರೆಲ್ಲಾ ಆ ಚಕ್ರವರ್ತಿಯ ಅನುಯಾಯಿಗಳೇ ಆದರು.

“ಆನಂತರ ಭಿಕ್ಷುಗಳೇ, ಆ ಚಕ್ರರತ್ನವು ಪೂರ್ವ ಸಮುದ್ರದಲ್ಲಿ ಮುಳುಗಿ ದಕ್ಷಿಣದಲ್ಲಿ ಉದಿಸಿ, ದಕ್ಷಿಣ ದಿಕ್ಕಿನಲ್ಲಿ ಚಲಿಸಿತು... ದಕ್ಷಿಣ ಸಮುದ್ರದಲ್ಲಿ ಮುಳುಗಿ ಪಶ್ಚಿಮ ದಿಕ್ಕಿನಲ್ಲಿ ಉದಿಸಿ ಆ ದಿಕ್ಕಿನಲ್ಲಿ ಚಲಿಸಿತು. ಯಾವ ಯಾವ ಪ್ರದೇಶಗಳಲ್ಲಿ ಆ ದಿವ್ಯ ಚಕ್ರರತ್ನವು ನಿಂತಿತೋ ಅಲ್ಲಿ ಚಕ್ರವರ್ತಿಯು ತನ್ನ ಚತುರಂಗ ಸೇನೆಯೊಡನೆ ಬೀಡುಬಿಟ್ಟನು. ಆಗ ಪಶ್ಚಿಮ ಸೀಮೆಯ ಪ್ರತಿ ರಾಜರೆಲ್ಲಾ ಚಕ್ರವರ್ತಿಯನ್ನು ಸಮೀಪಿಸಿ ಇಂತೆಂದರು- ‘ಬನ್ನಿ ಮಹಾರಾಜ, ನಿಮಗೆ ಸ್ವಾಗತ. ಮಹಾರಾಜ, ಎಲ್ಲವೂ ನಿಮ್ಮದೇ, ನೀವೇ ಅನುಶಾಸನ ಮಾಡಿ’. ಆಗ ಚಕ್ರವತಿಯು ಅವರನ್ನು ಕುರಿತು ಇಂತೆಂದನು- ‘ಪ್ರಾಣಿ ಹಿಂಸೆಯನ್ನು ಮಾಡಬೇಡಿ, ನಿಮಗೆ ಸೇರದುದನ್ನು ಸ್ವೀಕರಿಸಬೇಡಿ, ದುಷ್ಟವಾದ ಕಾಮಗಳಲ್ಲಿ ತೊಡಗಬೇಡಿ, ಸುಳ್ಳನ್ನು ನುಡಿಯಬೇಡಿ, ಮದ್ಯವನ್ನು ಸೇವಿಸಬೇಡಿ. ಉಚಿತ ರೀತಿಯಲ್ಲಿ ನಿಮ್ಮ ಸಂಪತ್ತನ್ನು ಅನುಭೋಗಿಸಿ’. ಭಿಕ್ಷುಗಳೇ, ಹೀಗೆ ಪಶ್ಚಿಮ ಸೀಮೆಯ ಪ್ರತಿ ರಾಜರೆಲ್ಲಾ ಆ ಚಕ್ರವರ್ತಿಯ ಅನುಯಾಯಿಗಳೇ ಆದರು.

“ಆನಂತರ ಭಿಕ್ಷುಗಳೇ, ಚಕ್ರರತ್ನವು ಪಶ್ಚಿಮ ಸಮುದ್ರದ ಮಧ್ಯದಲ್ಲಿ ಮುಳುಗಿ ಮತ್ತೆ ಎದ್ದು ಉತ್ತರ ದಿಕ್ಕಿನಲ್ಲಿ ಚಲಿಸಿತು. ಚಕ್ರವರ್ತಿಯು ಚತುರಂಗ ಬಲದೊಡನೆ ಅದನ್ನು ಹಿಂಬಾಲಿಸಿದನು. ಚಕ್ರರತ್ನವು ಯಾವ ಯಾವ ಪ್ರದೇಶಗಳಲ್ಲಿ ನಿಂತಿತೋ ಆ ಪ್ರದೇಶಗಳಲ್ಲಿ ಚಕ್ರವರ್ತಿಯು ಚತುರಂಗ ಸೇನೆಯೊಡನೆ ಬೀಡುಬಿಟ್ಟನು. ಆಗ ಪೂರ್ವ ದಿಕ್ಕಿನ ಪ್ರತಿ ರಾಜರೆಲ್ಲಾ ಚಕ್ರವರ್ತಿಯನ್ನು ಸಮೀಪಿಸಿ ಇಂತೆಂದರು- ‘ಬನ್ನಿ ಮಹಾರಾಜ, ನಿಮಗೆ ಸ್ವಾಗತ. ಮಹಾರಾಜ, ಎಲ್ಲವೂ ನಿಮ್ಮದೇ, ನೀವೇ ಅನುಶಾಸನ ಮಾಡಿ’. ಆಗ ಚಕ್ರವತಿಯು ಅವರನ್ನು ಕುರಿತು ಇಂತೆಂದನು- ‘ಪ್ರಾಣಿ ಹಿಂಸೆಯನ್ನು ಮಾಡಬೇಡಿ, ನಿಮಗೆ ಸೇರದುದನ್ನು ಸ್ವೀಕರಿಸಬೇಡಿ, ದುಷ್ಟವಾದ ಕಾಮಗಳಲ್ಲಿ ತೊಡಗಬೇಡಿ, ಸುಳ್ಳನ್ನು ನುಡಿಯಬೇಡಿ, ಮದ್ಯವನ್ನು ಸೇವಿಸಬೇಡಿ. ಉಚಿತ ರೀತಿಯಲ್ಲಿ ನಿಮ್ಮ ಸಂಪತ್ತನ್ನು ಅನುಭೋಗಿಸಿ’. ಭಿಕ್ಷುಗಳೇ, ಹೀಗೆ ಉತ್ತರ ದಿಕ್ಕಿನ ರಾಜರೆಲ್ಲಾ ಆ ಚಕ್ರವರ್ತಿಯ ಅನುಯಾಯಿಗಳೇ ಆದರು.

“ಹೀಗೆ ಭಿಕ್ಷುಗಳೇ, ಆ ಚಕ್ರರತ್ನವು ಸಮುದ್ರ ಪರಿಯಂತ ಹಬ್ಬಿರುವ ಪೃಥ್ವಿಯನ್ನು ಗೆದ್ದು ರಾಜಧಾನಿಗೆ ಹಿಂತಿರುಗಿತು. ಚಕ್ರವರ್ತಿಯ ಅಂತಃಪುರದ ದ್ವಾರದಲ್ಲಿ ರಾಜನ ನ್ಯಾಯಾಸ್ಥಾನದ ಮುಂದೆ ಅದನ್ನು ಒಂದುಕಡೆ ಸ್ಥಿರವಾಗಿ ನಿಲ್ಲಿಸಿದ್ದಾರೋ ಎನ್ನುವಂತೆ ನಿಂತಿತು. ಚಕ್ರವರ್ತಿಯ ಅಂತಃಪುರವು ಶೋಭಾಯಮಾನವಾಯಿತು.

ಎರಡನೆಯ ಮತ್ತು ಇತರ ಚಕ್ರವರ್ತಿಗಳು

“ಭಿಕ್ಷುಗಳೇ, ತರುವಾಯ ಒಂದು ಎರಡನೆಯ ಚಕ್ರವರ್ತಿಯೂ... ಮೂರನೆಯ ಚಕ್ರವರ್ತಿಯೂ... ನಾಲ್ಕನೆಯ ಚಕ್ರವರ್ತಿಯೂ... ಐದನೆಯ ಚಕ್ರವರ್ತಿಯೂ... ಆರನೆಯ ಚಕ್ರವರ್ತಿಯೂ (ಹೀಗೆಯೇ ಸಮುದ್ರಪರ್ಯಂತ ಹಬ್ಬಿರುವ ಪೃಥ್ವಿಗೆ ಒಡೆಯರಾದರು)... ಭಿಕ್ಷುಗಳೇ, ಆನಂತರ ಬಂದ ಏಳನೆಯ ಚಕ್ರವರ್ತಿ ಬಹುವರ್ಷಗಳಾದ ನಂತರ ಬಹು ಸಹಸ್ರ ವರ್ಷಗಳ ನಂತರ ಒಬ್ಬ ದೂತನನ್ನು ಕರೆದು ಇಂತೆಂದನು- ‘ಅಯ್ಯಾ, ದಿವ್ಯವಾದ ಈ ಚಕ್ರರತ್ನವು ತನ್ನ ಸ್ಥಾನದಿಂದ ಚ್ಯುತಿ ಹೊಂದಿರುವದನ್ನು ತನ್ನ ಸ್ಥಾನದಿಂದ ಕುಗ್ಗಿರುವುದನ್ನು ನೋಡುತ್ತಿರುವೆ ಏನು? ತಿಳಿಸು’ ಎಂದನು. ಆಗ ಆ ದೂತನು- ‘ದೇವ, ಹಾಗೆಯೇ ಆಗಲಿ’ ಎಂದು ಪ್ರತ್ಯುತ್ತರವಿತ್ತು. ಮತ್ತೆ ಅನೇಕ ವರ್ಷಗಳ ನಂತರ, ಅನೇಕ ಶತವರ್ಷಗಳ ನಂತರ, ಅನೇಕ ಸಹಸ್ರ ವರ್ಷಗಳ ನಂತರ ಆ ದಿವ್ಯವಾದ ಚಕ್ರರತ್ನವು ತನ್ನ ಹಿಂದಿನ ಸ್ಥಾನದಿಂದ ಚ್ಯುತವಾಗಿರುವುದನ್ನು ಕುಗ್ಗಿರುವುದನ್ನು ಕಂಡನು. ಹಾಗೆ ನೋಡಿ ಮೇಲೆ ರಾಜನ ಬಳಿಗೆ ಬಂದು- ‘ದೇವ, ದಿವ್ಯ ಚಕ್ರರತ್ನವು ತನ್ನ ಸ್ಥಾನದಿಂದ ಚ್ಯುತಿ ಹೊಂದಿದೆ, ನಿಮ್ಮ ಗಮನಕ್ಕೆ ತಂದಿದ್ದೇನೆ’ ಎಂದು ಹೇಳಿದನು.

ಆಗ ಚಕ್ರವರ್ತಿಯು ತನ್ನ ಜ್ಯೇಷ್ಠ ಪುತ್ರನನ್ನು ಕರೆದು ಇಂತೆಂದನು- ‘ಕುಮಾರ, ದಿವ್ಯವಾದ ಚಕ್ರರತ್ನವು ತನ್ನ ಸ್ಥಾನದಿಂದ ಹಿಂದೆ ಸರಿದಿದೆ, ಸ್ಥಾನದಿಂದ ಚ್ಯುತಿ ಹೊಂದಿದೆ. ಯಾವ ಚಕ್ರವತಿಯ ಚಕ್ರರತ್ನವು ಹಿಂದೆ ಸರಿದು ತನ್ನ ಸ್ಥಾನದಿಂದ ಚ್ಯುತಿಯಾಗುತ್ತದೆಯೋ ಅವನು ಬಹುಕಾಲ ಬದುಕುವುದಿಲ್ಲವೆಂದು ಕೇಳಿದ್ದೇನೆ. ಮನುಷ್ಯನು ಅನುಭವಿಸಬಹುದಾದ ಎಲ್ಲ ಭೋಗಗಳಲ್ಲಿಯೂ ಸುಖಿಸಿದ್ದೇನೆ. ದಿವ್ಯವಾದ ಭೋಗವನ್ನು ಪಡೆಯಬೇಕಾಗಿದೆ. ಸಮುದ್ರ ಪರಿಯಂತ ಹಬ್ಬಿರುವ ಈ ಪೃಥ್ವಿಯನ್ನು ಆಳು. ನಾನು ಗಡ್ಡ ಕೂದಲುಗಳನ್ನು ತೆಗೆದು ಕಾಷಾಯ ವಸ್ತ್ರವನ್ನು ಧರಿಸಿ ಮನೆಯನ್ನು ತೊರೆದು ಅನಗಾರಿಕನಾಗಿ ಪಬ್ಬಜಿತನಾಗುತ್ತೇನೆ.’

“ಭಿಕ್ಷುಗಳೇ, ಚಕ್ರವರ್ತಿಯು ಜೇಷ್ಠ ಪುತ್ರನನ್ನು ರಾಜನನ್ನಾಗಿ ಮಾಡಿ ಗಡ್ಡ ಕೂದಲುಗಳನ್ನು ತೆಗೆದು, ಕಾಷಾಯ ವಸ್ತ್ರಗಳನ್ನು ಧರಿಸಿ ಮನೆಯನ್ನು ತೊರೆದು ಪಬ್ಬಜಿತನಾದನು. ಹೀಗೆ ಪಬ್ಬಜಿತನಾದ ಏಳು ದಿನಗಳ ನಂತರ ರಾಜನ ಹತ್ತಿರವಿದ್ದ ಆ ಚಕ್ರರತ್ನವು ಅಂತರ್ಧಾನವಾಯಿತು.

“ಆಗ ಆ ಮೂರ್ಧ್ವಾಭಿಷಕ್ತನಾದ ಕ್ಷತ್ರಿಯ ರಾಜನ ಬಳಿಗೆ ಒಬ್ಬನು ಬಂದನು- ‘ದೇವ, ದಿವ್ಯವಾದ ಈ ಚಕ್ರರತ್ನವು ಅಂತರ್ಧಾನವಾಗಿದೆ, ತಮಗೆ ತಿಳಿದಿರಬೇಕಲ್ಲವೇ?’ ಎಂದನು. ಇದನ್ನು ಕೇಳಿದ ಚಕ್ರವರ್ತಿಯು ಅಸಂತೋಷಗೊಂಡನು, ದುಃಖತಪ್ತನಾದನು. ಶ್ರೇಷ್ಠನಾದ ಚಕ್ರವರ್ತಿಯು ನಡೆದುಕೊಳ್ಳಬೇಕಾದ ಬಗೆಗೆ ರಾಜರ್ಷಿಯನ್ನು ಆ ಚಕ್ರವರ್ತಿಯು ಕೇಳಲಿಲ್ಲ. ತನಗೆ ತೋರಿದಂತೆ ಜನರನ್ನಾಳಿದನು. ಹಿಂದಿನ ಶ್ರೇಷ್ಠರಾದ ಚಕ್ರವರ್ತಿಗಳು ಆಳಿದಂತೆ ಈತನೂ ಆಳಿದುದರಿಂದ ಹಿಂದಿನ ಜನರಂತೆ ಆತನ ಪ್ರಜೆಗಳು ಏಳ್ಗೆಯಾಗಲಿಲ್ಲ.

“ಆಗ ಭಿಕ್ಷುಗಳೇ, ಅಮಾತ್ಯರು, ಅಧಿಕಾರಿಗಳೂ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮಹಾಮಂತ್ರಿಗಳು ಅಂಗರಕ್ಷಕರೂ ದ್ವಾರಪಾಲಕರೂ ಮಂತ್ರ ಹೇಳುವವರೂ ಆ ಚಕ್ರವರ್ತಿಯ ಬಳಿಗೆ ಬಂದು ಹೀಗೆಂದರು- ‘ಹಿಂದಿನ ಶ್ರೇಷ್ಠರಾದ ಚಕ್ರವರ್ತಿಗಳು ಆಳಿದಂತೆ ನೀವು ಜನರನ್ನು ಒಂದೇ ಸಮನಾಗಿ ನೋಡಿಕೊಳ್ಳದೆ ನಿಮಗೆ ತೋರಿದಂತೆ ಆಳುತ್ತಿರುವುದರಿಂದ ಜನರು ಮೊದಲಿನಂತೆ ಏಳ್ಗೆಯನ್ನು ಹೊಂದುತ್ತಿಲ್ಲ. ದೇವ, ಅಮಾತ್ಯರೂ ಅಧಿಕಾರಿಗಳೂ, ಹಣಕಾಸನ್ನು ನೋಡಿಕೊಳ್ಳುವವರೂ, ಮಹಾಮಂತ್ರಿಗಳೂ, ಅಂಗರಕ್ಷಕರೂ, ದ್ವಾರಪಾಲಕರೂ ಮಂತ್ರ ಹೇಳುವವರೂ ಆದ ನಾವು ನಿಮ್ಮಲ್ಲಿದ್ದೇವೆ. ನಾವೆಲ್ಲರೂ ಶ್ರೇಷ್ಠ ಚಕ್ರವರ್ತಿಗಳನ್ನು ಸೇವಿಸಿದ್ದೇವೆ. ದೇವ, ನಮ್ಮನ್ನು ಕೇಳಿದರೆ ಶ್ರೇಷ್ಠರಾದ ಚಕ್ರವರ್ತಿಗಳು ಆಳಿದ ರೀತಿಯನ್ನು ವಿವರಿಸುತ್ತೇವೆ.’

ಆಯುವರ್ಣಾದಿಗಳ ಬಗ್ಗೆ

“ಆನಂತರ ಭಿಕ್ಷುಗಳೇ, ಮೂರ್ಧ್ವಾಭಿಷಕ್ತನಾದ ಆ ಕ್ಷತ್ರಿಯ ರಾಜನು ಅಮಾತ್ಯರನ್ನೂ, ಅಧಿಕಾರಿಗಳನ್ನೂ, ಹಣಕಾಸನ್ನು ನೋಡಿಕೊಳ್ಳುವವರನ್ನೂ, ಮಹಾಮಂತ್ರಿಗಳನ್ನೂ, ಅಂಗರಕ್ಷಕರನ್ನೂ, ದ್ವಾರಪಾಲಕರನ್ನೂ, ಮಂತ್ರ ಹೇಳುವವರನ್ನೂ, ಶ್ರೇಷ್ಠ ಚಕ್ರವರ್ತಿಯು ಹೇಗಿರುತ್ತಾನೆಂದು ಕೇಳಿದನು. ಅವರು ಶ್ರೇಷ್ಠ ಚಕ್ರವತಿಯ ರಾಜ್ಯಭಾವನ್ನು ವಿವರಿಸಿದರು. ಅದನ್ನು ತಿಳಿದಮೇಲೆ ನ್ಯಾಯವಾಗಿ ದೊರೆಯಬೇಕಾದ ರಕ್ಷಣೆಯನ್ನು ಒದಗಿಸಿದನು. ಆದರೆ ಹಣವಿಲ್ಲದವರಿಗೆ ಅದು ದೊರೆಯುವಂತೆ ಮಾಡಲಿಲ್ಲ. ಹೀಗೆ ಹಣವಿಲ್ಲದವರಿಗೆ ಹಣವು ದೊರೆಯದುದರಿಂದ ದಾರಿದ್ರ್ಯವು ವಿಪುಲವಾಗಿ ಬೆಳೆಯಿತು. ದಾರಿದ್ರ್ಯವು ಬೆಳೆದುದರಿಂದ ಒಬ್ಬನು ಕಳ್ಳತನ ಮಾಡಿದನು, ಅವನನ್ನು ಹಿಡಿದರು. ಮೂರ್ಧ್ವಾಭಿಷಕ್ತನಾದ ಕ್ಷತ್ರಿಯ ರಾಜನ ಬಳಿಗೆ ಅವನನ್ನು ತಂದು- ‘ದೇವ, ಈತನು ಪರರ ಸಂಪತ್ತನ್ನು ಕದ್ದಿದ್ದಾನೆ’ ಎಂದರು. ಆಗ ಆ ರಾಜನು ಕಳ್ಳನನ್ನು ಕುರಿತು- ‘ಎಲವೋ, ನೀನು ಬೇರೆಯವರ ಒಡವೆಯನ್ನು ಕದ್ದಿರುವುದು ನಿಜವೇ?’ ಎಂದು ಕೇಳಿದನು.

‘ಹೌದು, ದೇವ.’ ‘ಕಾರಣವೇನು?’ ‘ಜೀವನಕ್ಕೇನೂ ಇರಲಿಲ್ಲ.’

“ಆಗ ರಾಜನು ಆ ಕಳ್ಳನನ್ನು ಕುರಿತು ‘ಅಯ್ಯಾ, ಈ ಹಣವನ್ನು ತೆಗೆದುಕೋ, ಇದರಿಂದ ನಿನ್ನ ಜೀವವನ್ನು ರಕ್ಷಿಸಿಕೋ, ಮಾತಾಪಿತೃಗಳನ್ನೂ, ಪತ್ನೀ ಪುತ್ರರನ್ನೂ ಪೋಷಿಸು. ನಿನ್ನ ವೃತ್ತಿಯನ್ನು ಬಳಸಿಕೋ. ಸಮಣ ಬ್ರಾಹ್ಮಣರಿಗೆ ದಕ್ಷಿಣೆಯನ್ನು ನೀಡು. ಇಲ್ಲಿ ಸಮಾಧಾನವಿರುವಂತೆ ಮಾಡು. ಸುಖವನ್ನು ಪಡೆ. ಸ್ವರ್ಗವನ್ನು ಗಳಿಸುವ ರೀತಿಯಲ್ಲಿ ನಡೆದುಕೋ’ ಎಂದನು. ‘ಹಾಗೆಯೇ ಆಗಲಿ ದೇವ’ ಎಂದು ಆ ಮನುಷ್ಯನು ರಾಜನಿಗೆ ಹೇಳಿದನು.

“ಮತ್ತೊಬ್ಬನೂ ಬೇರೆಯವರ ಒಡವೆಯನ್ನು ಕದ್ದನು. ಅವನನ್ನು ಹಿಡಿದರು. ರಾಜನ ಹತ್ತಿರಕ್ಕೆ ಅವನನ್ನೂ ತಂದರು. ‘ದೇವ, ಇವನು ಪರರ ಒಡವೆಯನ್ನು ಕದ್ದಿದ್ದಾನೆ’ ಎಂದರು. ಇದನ್ನು ಕೇಳಿದ ರಾಜನು ಆತನನ್ನು ಕುರಿತು- ‘ಪರರ ಒಡವೆಯನ್ನು ನೀನು ಕದ್ದಿರುವುದು ನಿಜವೇ?’ ಎಂದು ಆ ಕಳ್ಳನನ್ನು ಪ್ರಶ್ನಿಸಿದನು.

‘ದೇವ, ಹೌದು.’ ‘ಕಾರಣವೇನು?’ ‘ಜೀವನಕ್ಕೇನೂ ಇರಲಿಲ್ಲ.’

“ಆಗ ಭಿಕ್ಷುಗಳೇ, ರಾಜನು ಆ ಮನುಷ್ಯನಿಗೆ ಹಣವನ್ನು ಕೊಟ್ಟನು- ‘ಅಯ್ಯಾ, ಈ ಹಣವನ್ನು ತೆಗೆದುಕೋ, ಇದರಿಂದ ನಿನ್ನ ಜೀವವನ್ನು ರಕ್ಷಿಸಿಕೋ, ಮಾತಾಪಿತೃಗಳನ್ನೂ, ಪತ್ನೀ ಪುತ್ರರನ್ನೂ ಪೋಷಿಸು. ನಿನ್ನ ವೃತ್ತಿಯನ್ನು ಬಳಸಿಕೋ. ಸಮಣ ಬ್ರಾಹ್ಮಣರಿಗೆ ದಕ್ಷಿಣೆಯನ್ನು ನೀಡು. ಇಲ್ಲಿ ಸಮಾಧಾನವಿರುವಂತೆ ಮಾಡು. ಸುಖವನ್ನು ಪಡೆ. ಸ್ವರ್ಗವನ್ನು ಗಳಿಸುವ ರೀತಿಯಲ್ಲಿ ನಡೆದುಕೋ’ ಎಂದನು. ‘ಹಾಗೆಯೇ ಆಗಲಿ ದೇವ’ ಎಂದು ಆ ಮನುಷ್ಯನು ರಾಜನಿಗೆ ಹೇಳಿದನು.

“ಭಿಕ್ಷುಗಳೇ, ಆ ರಾಜ್ಯದಲ್ಲಿನ ಜನರು ಈ ಸುದ್ದಿಯನ್ನು ಕೇಳಿದರು- ‘ಕದ್ದವರಿಗೆ ರಾಜನು ಹಣವನ್ನು ಕೊಡುತ್ತಾನೆ’. ಇದನ್ನು ಕೇಳಿದ ಅವರು ‘ನಾವೂ ಪರರ ಒಡವೆಯನ್ನು ಏಕೆ ಕದಿಯಬಾರದು?’ ಎಂದುಕೊಂಡರು. ಹೀಗೆಂದುಕೊಂಡವರಲ್ಲೊಬ್ಬನು ಕಳ್ಳತನ ಮಾಡಿದನು. ಅವನನ್ನು ಹಿಡಿದು ರಾಜನ ಬಳಿಗೆ ತಂದರು. ‘ದೇವ, ಇವನು ಕಳ್ಳತನ ಮಾಡಿದ್ದಾನೆ’ ಎಂದರು. ಇದನ್ನೂ ಕೇಳಿದ ರಾಜನು ‘ಇದು ನಿಜವೇ?’ ಎಂದು ಆ ಮನುಷ್ಯನನ್ನು ಕೇಳಿದನು.

‘ನಿಜ ದೇವ.’ ‘ಕಾರಣವೇನು?’ ‘ಜೀವನಕ್ಕೇನೂ ಇರಲಿಲ್ಲ.’

“ಆಗ ಭಿಕ್ಷುಗಳೇ, ಆ ಕ್ಷತ್ರಿಯ ರಾಜನು ಹೀಗೆಂದುಕೊಂಡನು. ಇತರರ ಒಡವೆಯನ್ನು ಕದ್ದವರಿಗೆಲ್ಲಾ ನಾನು ಹೀಗೆ ದುಡ್ಡು ಕೊಡುತ್ತ ಹೋದರೆ ರಾಜ್ಯದಲ್ಲಿ ಕಳ್ಳತನವು ಬೆಳೆಯುತ್ತದೆ. ಈ ಮನುಷ್ಯನ ತಲೆಯನ್ನು ತೆಗೆದು ಬೇರೆಯವರು ಬುದ್ಧಿ ಕಲಿಯುವಂತೆ ಮಾಡುವುದು ಸಾಧುವಾದುದು! ಆಗ ರಾಜನು ತನ್ನ ದೂತರಿಗೆ ಹೀಗೆ ಆಜ್ಞೆ ಮಾಡಿದನು- ‘ಈ ಮನುಷ್ಯನ ಕೈಗಳನ್ನು ಬಲವಾದ ಹಗ್ಗದಿಂದ ಹಿಂದಕ್ಕೆ ಕಟ್ಟಿ ಅವನ ತಲೆಗೂದಲನ್ನು ತೆಗೆದು ತಮಟೆಯ ಸದ್ದಿನೊಂದಿಗೆ ಬೀದಿ ಬೀದಿಗಳಲ್ಲಿ ಮೂಲೆಯಿಂದ ಮೂಲೆಗೆ ಎಳೆದುಕೊಂಡು ಹೋಗಿ ಪಟ್ಟಣದ ದಕ್ಷಿಣದ ಹೆಬ್ಬಾಗಿಲಿನ ಮೂಲಕ ನಿಷ್ಕ್ರಮಿಸಿ ಅಲ್ಲಿ ಅವನನ್ನು ನಿಲ್ಲಿಸಿ ಅವನ ತಲೆಯನ್ನು ಕತ್ತರಿಸಿಹಾಕಿಬಿಡಿ.’ ‘ದೇವ, ಹಾಗೆಯೇ ಆಗಲಿ’ ಎಂದು ರಾಜನಿಗೆ ಹೇಳಿ ಆ ರಾಜದೂತರು ಆ ಕಳ್ಳನನ್ನು ರಾಜನು ಹೇಳಿದಂತೆಯೇ ನಗರದ ದಕ್ಷಿಣಕ್ಕೆ ಎಳೆದುಕೊಂಡು ಹೋಗಿ ಅಲ್ಲಿ ಅವನ ತಲೆಯನ್ನು ಕಡಿದರು.

“ಭಿಕ್ಷುಗಳೇ, ರಾಜ್ಯದ ಪ್ರಜೆಗಳು- ‘ಪರರ ಒಡವೆಯನ್ನು ದೋಚುವವರ ತಲೆಯನ್ನು ರಾಜನು ಕಡಿಸಿ ಹಾಕುತ್ತಾನೆ. ಈ ರೀತಿ ಕಳ್ಳತನವನ್ನು ಮೂಲೋತ್ಪಾಟನೆ ಮಾಡಲೆತ್ನಿಸಿದ್ದಾನೆ’ ಎಂಬುದನ್ನು ಕೇಳಿದರು. ಅವರಲ್ಲಿ ಕೆಲವರು ನಾವೂ ತೀಕ್ಷ್ಣವಾದ ಶಸ್ತ್ರಗಳನ್ನು ಉಪಯೋಗಿಸೋಣ ಎಂದುಕೊಂಡರು. ‘ಯಾರಿಂದ ಕದಿಯುತ್ತೇವೋ ಅವರನ್ನು ತೀಕ್ಷ್ಣವಾದ ಶಸ್ತ್ರಗಳಿಂದ ಹೊಡೆದು ಅವರ ತಲೆಯನ್ನು ತೆಗೆದು ಅವರನ್ನು ಮುಗಿಸಿಬಿಡೋಣ, ಸದ್ದಿಲ್ಲದಂತೆ ಮಾಡೋಣ!’ ತೀಕ್ಷ್ಣವಾದ ಶಸ್ತ್ರಗಳನ್ನು ಹಿಡಿದು ಗ್ರಾಮ ಗ್ರಾಮಗಳಿಗೆ, ಪಟ್ಟಣ ಪಟ್ಟಣಗಳಿಗೆ, ನಗರ ನಗರಗಳಿಗೆ ನುಗ್ಗಿದರು. ಹೆದ್ದಾರಿಯನ್ನು ಕಾಯ್ದರು. ಸಿಕ್ಕಿದ ಜನರಿಂದ ಸುಲಿಗೆ ಮಾಡಿದರು. ಅವರ ತಲೆಗಳನ್ನು ಕತ್ತರಿಸಿ ಅವರನ್ನು ಸದ್ದಿಲ್ಲದಂತೆ ಮಾಡಿದರು. ಅವರನ್ನು ಮುಗಿಸಿಬಿಟ್ಟರು.

“ಭಿಕ್ಷುಗಳೇ, ಹಣವಿಲ್ಲದವರಿಗೆ ರಾಜನು ಹಣವನ್ನೊದಗಿಸದಿದ್ದುದರಿಂದ ದಾರಿದ್ರ್ಯವು ಬೆಳೆಯಿತು. ದಾರಿದ್ರ್ಯವು ಬೆಳೆದುದರಿಂದ ಕಳ್ಳತನ ಹೆಚ್ಚಾಯಿತು. ಕಳ್ಳತನ ಬೆಳೆದುದರಿಂದ ಶಸ್ತ್ರಗಳ ಬಳಕೆ ಹೆಚ್ಚಾಯಿತು. ಶಸ್ತ್ರಗಳ ಬಳಕೆ ಹೆಚ್ಚಾದುದರಿಂದ ಪ್ರಾಣಿಹಿಂಸೆ ಹೆಚ್ಚಾಯಿತು. ಪ್ರಾಣಿಹಿಂಸೆ ಹೆಚ್ಚಾದುದರಿಂದ ಜೀವಿಗಳ ಆಯಸ್ಸು ಕಡಿಮೆಯಾಯಿತು. ಮನುಷ್ಯರ ಕಾಂತಿಯು ಕಡಿಮೆಯಾಯಿತು. ಅವರ ಆಯಸ್ಸು ಎಂಬತ್ತು ಸಾವಿರ ವರ್ಷವಿದ್ದರೆ ಅವರ ಮಕ್ಕಳ ಆಯಸ್ಸು ನಲವತ್ತು ಸಾವಿರ ವರ್ಷಕ್ಕಿಳಿಯಿತು.

“ಹೀಗೆ ಆಯಸ್ಸು ನಲವತ್ತು ಸಾವಿರ ವರ್ಷಕ್ಕಿಳಿದವರಲ್ಲಿ ಒಬ್ಬನು ಬೇರೆಯವರ ಒಡವೆಯನ್ನು ಕದ್ದನು. ಅವನನ್ನು ಸೈನಿಕರು ಹಿಡಿದರು. ಅವನನ್ನು ಮೂಧ್ವಾಭಿಷಕ್ತನಾದ ಕ್ಷತ್ರಿಯ ರಾಜನ ಬಳಿಗೆ ತಂದರು. ‘ದೇವ, ಈ ಮನುಷ್ಯನು ಬೇರೆಯವರ ಒಡವೆಯನ್ನು ಕದ್ದಿದ್ದಾನೆ.’ ಇದನ್ನು ಕೇಳಿದ ಆ ರಾಜನು ‘ಎಲವೋ, ನೀನು ಇತರರ ಒಡವೆಯನ್ನು ಕದ್ದಿರುವುದು ನಿಜವೇ?’ ಎಂದು ಕೇಳಿದನು. ‘ಇಲ್ಲ ದೇವ’ ಎಂದು ಆತನು ಸುಳ್ಳನ್ನೇ ಹೇಳಿದನು.

“ಭಿಕ್ಷುಗಳೇ, ಹೀಗೆ ಹಣವಿಲ್ಲದವರಿಗೆ ಹಣವನ್ನೊದಗಿಸದಿದ್ದುದರಿಂದ ದಾರಿದ್ರ್ಯವು ಬೆಳೆಯಿತು. ದಾರಿದ್ರ್ಯವು ಬೆಳೆದುದರಿಂದ ಕಳ್ಳತನ ಹೆಚ್ಚಾಯಿತು. ಕಳ್ಳತನ ಹೆಚ್ಚಾದುದರಿಂದ ಶಸ್ತ್ರದ ಬಳಕೆ ಹೆಚ್ಚಾದುದರಿಂದ ಪ್ರಾಣಿಹಿಂಸೆ ಅತಿಯಾಯಿತು. ಪ್ರಾಣಿಹಿಂಸೆ ಅತಿಯಾದುದರಿಂದ ಸುಳ್ಳು ಹೇಳುವ ಸ್ವಭಾವ ಬೆಳೆಯಿತು. ಸುಳ್ಳು ಹೇಳುವುದು ಹೆಚ್ಚಾದುದರಿಂದ ಜೀವಿಗಳ ಆಯಸ್ಸು ಕ್ಷಯಿಸಿತು. ಮನುಷ್ಯರ ಕಾಂತಿಯು ಕಡಿಮೆಯಾಯಿತು. ಆಯಸ್ಸು ಕ್ಷಯಿಸಿ ಕಾಂತಿಯು ಕಡಿಮೆಯಾಗಿ ನಲವತ್ತು ಸಾವಿರ ವರ್ಷ ಆಯಸ್ಸಿದ್ದ ಮನುಷ್ಯರ ಮಕ್ಕಳ ಆಯಸ್ಸು ಇಪ್ಪತ್ತು ಸಾವಿರಕ್ಕಿಳಿಯಿತು.

“ಆಯಸ್ಸು ಇಪ್ಪತ್ತು ಸಾವಿರಕ್ಕಿಳಿದವರಲ್ಲಿ ಒಬ್ಬನು ಪರರ ಒಡವೆಯನ್ನು ಕದ್ದನು. ಆ ಮನುಷ್ಯನನ್ನು ದೂತನೊಬ್ಬನು ರಾಜನ ಬಳಿಗೆ ತಂದು ‘ಈತನು ಪರರ ಒಡವೆಯನ್ನು ಕದ್ದಿದ್ದಾನೆ’ ಎಂದು ಚಾಡಿ ಹೇಳುವಂತೆ ಮಾತನಾಡಿದನು.

“ಹೀಗೆ ಭಿಕ್ಷುಗಳೇ, ಹೀಗೆ ಹಣವಿಲ್ಲದವರಿಗೆ ಹಣವನ್ನೊದಗಿಸದಿದ್ದುದರಿಂದ ದಾರಿದ್ರ್ಯವು ಬೆಳೆಯಿತು. ದಾರಿದ್ರ್ಯವು ಬೆಳೆದುದರಿಂದ ಕಳ್ಳತನ ಹೆಚ್ಚಾಯಿತು. ಕಳ್ಳತನ ಹೆಚ್ಚಾದುದರಿಂದ ಶಸ್ತ್ರದ ಬಳಕೆ ಹೆಚ್ಚಾದುದರಿಂದ ಪ್ರಾಣಿಹಿಂಸೆ ಅತಿಯಾಯಿತು. ಪ್ರಾಣಿಹಿಂಸೆ ಅತಿಯಾದುದರಿಂದ ಸುಳ್ಳು ಹೇಳುವ ಸ್ವಭಾವ ಬೆಳೆಯಿತು. ಸುಳ್ಳು ಹೇಳುವುದು ಹೆಚ್ಚಾದುದರಿಂದ ಚಾಡಿ ಹೇಳುವುದು ಸಾಮಾನ್ಯವಾಯಿತು. ಚಾಡಿ ಹೇಳುವುದು ಹೆಚ್ಚಾದುದರಿಂದ ಜೀವಿಗಳ ಆಯಸ್ಸು ಕ್ಷಯಿಸಿತು. ಮನುಷ್ಯರ ಕಾಂತಿಯು ಕಡಿಮೆಯಾಯಿತು. ಆಯಸ್ಸು ಕ್ಷಯಿಸಿ ಕಾಂತಿಯು ಕಡಿಮೆಯಾಗಿ ಇಪ್ಪತ್ತು ಸಾವಿರ ವರ್ಷ ಆಯಸ್ಸಿದ್ದ ಮನುಷ್ಯರ ಮಕ್ಕಳ ಆಯಸ್ಸು ಹತ್ತು ಸಾವಿರಕ್ಕೆ ಇಳಿಯಿತು.

“ಹತ್ತು ಸಾವಿರ ವರ್ಷ ಆಯಸ್ಸುಳ್ಳ ಮನುಷ್ಯರಲ್ಲಿ ಕೆಲವರು ತೇಜೋವಂತರಾಗಿದ್ದರು. ಮತ್ತೆ ಕೆಲವರು ದುರ್ಬಣ್ಣವುಳ್ಳವರಾಗಿದ್ದರು. ದುರ್ಬಣ್ಣವುಳ್ಳವರಾದವರು ತೇಜೋವಂತರಾದವರ ಬಗೆಗೆ ಅಸೂಯೆಯನ್ನು ಹೊಂದಿದರು. ಅವರ ಪತ್ನಿಯರ ಪಾತಿವ್ರತ್ಯವನ್ನು ಹಾಳು ಮಾಡಿದರು.

“ಹೀಗೆ ಭಿಕ್ಷುಗಳೇ, ಹಣವಿಲ್ಲದವರಿಗೆ ಹಣವನ್ನೊದಗಿಸದಿದ್ದುದರಿಂದ ದಾರಿದ್ರ್ಯವು ಬೆಳೆಯಿತು... ಕಾಮಗಳ ಮಿಥ್ಯಾಚಾರ ಅತಿಯಾಯಿತು. ಇದರಿಂದ ಜೀವಿಗಳ ಆಯಸ್ಸು ಕಡಿಮೆಯಾಯಿತು. ಮನುಷ್ಯರ ಕಾಂತಿಯು ಕ್ಷೀಣವಾಯಿತು. ಹೀಗೆ ಆಯಸ್ಸು ಮತ್ತು ಕಾಂತಿಗಳು ಕಡಿಮೆಯಾದ ಮನುಷ್ಯರ ಮಕ್ಕಳ ಆಯಸ್ಸು ಹತ್ತು ಸಾವಿರದಿಂದ ಐದು ಸಾವಿರಕ್ಕೆ ಇಳಿಯಿತು.

“ಐದು ಸಾವಿರ ವರ್ಷಗಳ ಆಯಸ್ಸುಳ್ಳ ಈ ಮನುಷ್ಯರಲ್ಲಿ ಎರಡು ವಿಧವಾದ ಸ್ವಭಾವಗಳು ಬೆಳೆದುವು- ಕಠಿಣವಾದ ಮಾತನ್ನಾಡುವುದು ಮತ್ತು ಕಾಡುಹರಟೆಯಲ್ಲಿ ನಿರತರಾಗುವುದು. ಈ ಕೆಟ್ಟ ಸ್ವಭಾವವು ಬೆಳೆದುದರಿಂದ ಮನುಷ್ಯರ ಆಯಸ್ಸೂ ಕಾಂತಿಯೂ ಕ್ಷೀಣ ಹೊಂದಿದವು. ಹೀಗೆ ಆಯಸ್ಸು ಮತ್ತು ಕಾಂತಿಗಳನ್ನು ಕಳೆದುಕೊಂಡವರ ಮಕ್ಕಳಲ್ಲಿ ಕೆಲವರ ಆಯಸ್ಸು ಎರಡು ಸಾವಿರದ ಐನೂರು ವರ್ಷಕ್ಕೂ ಮತ್ತೆ ಕೆಲವರ ಆಯಸ್ಸು ಎರಡು ಸಾವಿರಕ್ಕೂ ಇಳಿದುವು.

“ಭಿಕ್ಷುಗಳೇ, ಎರಡು ಸಾವಿರದ ಐನೂರು ವರ್ಷಗಳ ಆಯಸ್ಸಿನವರಲ್ಲಿ ದುರಾಸೆಯೂ ಹಿಂಸಾಪ್ರವೃತ್ತಿಯೂ ಬೆಳೆದುವು. ಇಂಥ ದುರಾಸೆ ಹಿಂಸಾಪ್ರವೃತ್ತಿಯ ಜನರ ಆಯಸ್ಸೂ ಕಾಂತಿಯೂ ಕಡಿಮೆಯಾದುವು. ಅವರ ಮಕ್ಕಳ ಆಯಸ್ಸು ಸಾವಿರ ವರ್ಷಕ್ಕೆ ಇಳಿಯಿತು.

“ಸಾವಿರ ವರ್ಷ ಆಯಸ್ಸಿದ್ದವರಲ್ಲಿ ಮಿಥ್ಯಾದೃಷ್ಟಿ ಬೆಳೆಯಿತು. ಇಂಥ ಮಿಥ್ಯಾದೃಷ್ಟಿಯ ಜನರ ಆಯಸ್ಸೂ ಕಾಂತಿಯೂ ಕಡಿಮೆಯಾದುವು. ಅವರ ಮಕ್ಕಳ ಆಯಸ್ಸು ಐನೂರು ವರ್ಷದಷ್ಟು ಕಡಿಮೆಯಾಯಿತು.

“ಐನೂರು ವರ್ಷ ಆಯಸ್ಸಿನ ಜನರಲ್ಲಿ ಧರ್ಮಲುಪ್ತವಾದ ರಾಗ ಅತಿಯಾದ ಲೋಭ ಮಿಥ್ಯಾ ಧರ್ಮ ಬೆಳೆದುವು. ಅವರ ಆಯಸ್ಸೂ ಕಾಂತಿಯೂ ಕ್ಷೀಣಗೊಂಡವು. ಹೀಗೆ ಆಯಸ್ಸೂ ಕಾಂತಿಯೂ ಕ್ಷೀಣಗೊಂಡವರ ಮಕ್ಕಳಲ್ಲಿ ಕೆಲವರ ಆಯಸ್ಸು ಇನ್ನೂರೈವತ್ತಕ್ಕೂ ಮತ್ತೆ ಕೆಲವರ ಆಯಸ್ಸು ಇನ್ನೂರು ವರ್ಷಕ್ಕೂ ಇಳಿದುವು.

“ಇನ್ನೂರೈವತ್ತು ವರ್ಷದಷ್ಟು ಕಡಿಮೆಯಾದ ಆಯಸ್ಸಿನ ಜನರು ತಂದೆ-ತಾಯಿಗಳನ್ನು ಅಸಡ್ಡೆಯಿಂದ ಕಂಡರು. ಶ್ರೇಷ್ಠರಾದ ಸಮಣರಾದವರನ್ನು ಧಿಕ್ಕರಿಸಿದರು. ಜ್ಞಾನಿಗಳನ್ನು ನಿರ್ಲಕ್ಷಿಸಿದರು. ಕುಲಶ್ರೇಷ್ಠರನ್ನು ಅಗೌರವದಿಂದ ಕಂಡರು.

“ಹೀಗೆ ಭಿಕ್ಷುಗಳೇ, ಹಣವಿಲ್ಲದಿದ್ದವರಿಗೆ ಹಣವನ್ನೊದಗಿಸಿದ್ದುದರಿಂದ ದಾರಿದ್ರ್ಯವು ಬೆಳೆಯಿತು. ದಾರಿದ್ರ್ಯವು ಬೆಳೆದುದರಿಂದ ಕಳ್ಳತನ ಹೆಚ್ಚಾಯಿತು. ಕಳ್ಳತನ ಹೆಚ್ಚಾದುದರಿಂದ ಶಸ್ತ್ರದ ಬಳಕೆ ಹೆಚ್ಚಾಯಿತು. ಶಸ್ತ್ರಗಳ ಬಳಕೆ ಹೆಚ್ಚಾದುದರಿಂದ ಪ್ರಾಣಿಹಿಂಸೆ ಅತಿಯಾಯಿತು. ಪ್ರಾಣಿಹಿಂಸೆ ಹೆಚ್ಚಾದುದರಿಂದ ಸುಳ್ಳು ಹೇಳುವುದು ಅತಿಯಾಯಿತು. ಸುಳ್ಳು ಹೇಳುವುದು ಅತಿಯಾದುದರಿಂದ ಚಾಡಿ ಹೇಳುವುದು ಸಾಮಾನ್ಯವಾಯಿತು. ಚಾಡಿ ಹೇಳುವುದು ಅತಿಯಾದುದರಿಂದ ಕಾಮಗಳಲ್ಲಿ ಮಿಥ್ಯಾಚಾರ ಬೆಳೆಯಿತು. ಕಾಮಗಳಲ್ಲಿನ ಮಿಥ್ಯಾಚಾರ ಬೆಳೆದುದರಿಂದ ಕಠಿಣವಾಗಿ ಮಾತನಾಡುವುದೂ, ಕಾಡುಹರಟೆಯಲ್ಲಿ ನಿರತರಾಗುವುದೂ ಸಾಮಾನ್ಯವಾಯಿತು. ಈ ಎರಡು ಪ್ರವೃತ್ತಿಗಳು ಹೆಚ್ಚಾದುದರಿಂದ ದುರಾಶೆಯು ಹಿಂಸಾಬುದ್ಧಿಯೂ ಬೆಳೆದುವು. ಇದರಿಂದ ಮಿಥ್ಯಾದೃಷ್ಟಿಯೂ ಬೆಳೆದು ಧರ್ಮಲುಪ್ತವಾದ ರಾಗ ಅತಿಯಾದ ಲೋಭ ಮಿಥ್ಯಾ ಭಾವನೆಗಳು ವೃದ್ಧಿಯಾದುವು. ಹೀಗೆ ಮೂರು ಬಗೆಯ ಮಿಥ್ಯಾ ಭಾವನೆಗಳು ವೃದ್ಧಿಯಾದುವು. ಹೀಗೆ ಮೂರು ಬಗೆಯ ಮಿಥ್ಯಾ ಭಾವನೆಗಳು ಬೆಳೆದುದರಿಂದ ಜನರು ತಂದೆ-ತಾಯಿಯರನ್ನು ಅಸಡ್ಡೆಯಿಂದ ಕಾಣುವುದೂ ಸಮಣರನ್ನು ಧಿಕ್ಕರಿಸುವುದೂ, ಜ್ಞಾನಿಗಳನ್ನು ನಿರ್ಲಕ್ಷಿಸುವುದೂ, ಕುಲ ಶ್ರೇಷ್ಠರನ್ನು ಅಗೌರವದಿಂದ ಕಾಣುವುದೂ ಸಾಮಾನ್ಯವಾದುವು. ಇಂಥ ಮಿಥ್ಯಾ ಭಾವನೆಯ ಜನರ ಆಯಸ್ಸೂ ಕಾಂತಿಯೂ ಕ್ಷೀಣಗೊಂಡವು. ಹೀಗೆ ಆಯಸ್ಸೂ, ಕಾಂತಿಯೂ ಕ್ಷೀಣಗೊಂಡವರ ಮಕ್ಕಳ ಆಯಸ್ಸು ಇನ್ನೂರೈವತ್ತು ವರ್ಷದಿಂದ ನೂರು ವರ್ಷಕ್ಕೆ ಇಳಿಯಿತು.

ಹತ್ತು ವರ್ಷಗಳ ಆಯಸ್ಸು

“ಭಿಕ್ಷುಗಳೇ, ಇಂಥ ಜನರಿಗೆ ಮುಂದೆ ಕೇವಲ ಹತ್ತು ವರ್ಷ ಆಯಸ್ಸುಳ್ಳ ಮಕ್ಕಳು ಹುಟ್ಟುತ್ತಾರೆ. ಹತ್ತು ವರ್ಷ ಆಯಸ್ಸುಳ್ಳವರ ಹೆಣ್ಣು ಮಕ್ಕಳು ಐದು ವರ್ಷವಾಗಿದ್ದಾಗಲೇ ಮೈನೆರೆಯುತ್ತಾರೆ. ಹತ್ತು ವರ್ಷ ಆಯಸ್ಸಿನ ಜನರಿಗೆ ತುಪ್ಪ, ಬೆಣ್ಣೆ, ಎಣ್ಣೆ, ಜೇನುತುಪ್ಪ, ಸಕ್ಕರೆ, ಉಪ್ಪುಗಳ ರುಚಿಯನ್ನು ತಿಳಿಯುವ ಸಾಮರ್ಥ್ಯವೇ ಇರುವುದಿಲ್ಲ. ಈ ಅಲ್ಪಾಯುಗಳಿಗೆ ಕುದ್ರೂಸದ ಅಕ್ಕಿಯೇ ಅತ್ಯುತ್ತಮ ಆಹಾರವಾಗಿಬಿಡುತ್ತದೆ. ಇಂದು ಅನ್ನ ಮಾಂಸದ ಮೇಲೋಗರಗಳೇ ಅತ್ಯುತ್ತಮ ಆಹಾರವಾಗಿರುವಂತೆ ಆ ಜನರಿಗೆ ಕುದ್ರಸದ ಅಕ್ಕಿಯೇ ಅತ್ಯುತ್ತಮ ಆಹಾರವಾಗುತ್ತದೆ.

ಹತ್ತು ವರ್ಷ ಆಯಸ್ಸಿನ ಈ ಜನರಿಗೆ ದಶ ಕುಶಲ ಕರ್ಮಪಥಗಳ ಅರಿವೇ ಇರುವುದಿಲ್ಲ. ಹತ್ತು ಅಕುಶಲ ಕರ್ಮಗಳ ಪಥದಲ್ಲಿಯೇ ಅವರು ಹೋಗುತ್ತಾರೆ. ಅವರಲ್ಲಿ ‘ಕುಶಲ’ ಪದದ ಬಳಕೆಯೇ ಇರುವುದಿಲ್ಲ. ಅವರಿಗೆ ಆ ಪದವೇ ಗೊತ್ತಿರುವುದಿಲ್ಲ. ಕುಶಲವನ್ನು ಮಾಡುವ ಸ್ವಭಾವವೂ ಅವರಲ್ಲಿರುವುದಿಲ್ಲ. ಈ ಜನರು ಮಾತಾಪಿತೃಗಳನ್ನು ಅಸಡ್ಡೆಯಿಂದ ಕಾಣುತ್ತಾರೆ. ಸಮಣ ಬ್ರಾಹ್ಮಣರನ್ನು ಧಿಕ್ಕರಿಸುತ್ತಾರೆ. ಕುಲಶ್ರೇಷ್ಠರನ್ನು ಅಗೌರವದಿಂದ ನೋಡುತ್ತಾರೆ. ಅವರನ್ನೇ ಪೂಜಿಸುವ ಪ್ರಶಂಸಿಸುವ ಜನರು ಇರುತ್ತಾರೆ. ಇಂದು ಮಾತಾಪಿತೃಗಳನ್ನು ಭಕ್ತಿಯಿಂದ ಕಾಣುವ ಸಮಣರನ್ನು, ಜ್ಞಾನಿಗಳನ್ನು ಗೌರವದಿಂದ ನೋಡಿಕೊಳ್ಳುವ, ಕುಲಶ್ರೇಷ್ಠರನ್ನು ಚೆನ್ನಾಗಿ ಕಾಣುವ ಜನರಿಗೆ ಯಾವ ಪೂಜ್ಯತೆ ಪ್ರಶಂಸೆಗಳು ದೊರಕುತ್ತಿವೆಯೋ ಹಾಗೆ ಆ ಕಾಲದ ದಶವರ್ಷ ಆಯಸ್ಸಿನವರಿಗೆ ಪೂಜ್ಯತೆ ಪ್ರಶಂಸೆಗಳು ದೊರಕುತ್ತವೆ.

“ಹತ್ತು ವರ್ಷ ವಯಸ್ಸಿನ ಆ ಮನುಷ್ಯರು ತಾಯಿಯರನ್ನೂ, ತಾಯಿಯ ಸೋದರಿಯರನ್ನೂ, ಸೋದರ ಮಾವಂದಿರ ಪತ್ನಿಯರನ್ನೂ, ಗುರುಪತ್ನಿಯರನ್ನೂ, ಹಿರಿಯರನ್ನೂ ಗೌರವದಿಂದ ಕಾಣುವುದಿಲ್ಲ. ಆಡು, ಕೋಳಿ, ಹಂದಿ, ನಾಯಿ, ನರಿಗಳಂತೆ ಜನರು ಯಾವ ಭೇದವೂ ಇಲ್ಲದೆ ಯಾರು ಯಾರಲ್ಲಾದರೂ ಲೈಂಗಿಕ ಸಂಬಂಧವಿಟ್ಟುಕೊಂಡು ಬಿಡುತ್ತಾರೆ.

“ಹತ್ತು ವರ್ಷ ಆಯಸ್ಸಿನ ಈ ಜನರು ಪರಸ್ಪರ ದ್ವೇಷದಿಂದ ಕೂಡಿರುತ್ತಾರೆ. ಒಬ್ಬರನ್ನೊಬ್ಬರು ಬಾಧಿಸುವುದರಲ್ಲಿ ನಿರತರಾಗುತ್ತಾರೆ. ಪರಸ್ಪರ ಹಿಂಸೆಯನ್ನು ಮಾಡುತ್ತಾ ಕ್ರೋಧಮನಸ್ಕರಾಗಿ ಒಬ್ಬನು ಮತ್ತೊಬ್ಬನನ್ನು ವಧಿಸಬೇಕೆಂಬ ಬಯಕೆಯಿಂದ ತುಂಬಿರುತ್ತಾರೆ. ತಾಯಿಯನ್ನು ಮಕ್ಕಳೂ, ಮಕ್ಕಳನ್ನು ತಾಯಿಯೂ, ತಂದೆಯನ್ನು ಮಕ್ಕಳೂ, ಮಕ್ಕಳನ್ನು ತಂದೆಯೂ, ಅಣ್ಣತಮ್ಮಂದಿರು ಅಕ್ಕತಂಗಿಯರನ್ನೂ, ಅಕ್ಕತಂಗಿಯರು, ಅಣ್ಣತಮ್ಮಂದಿರನ್ನೂ ಪರಸ್ಪರ ಹಿಂಸಿಸುವ ಬುದ್ಧಿಯನ್ನು ಹೊಂದಿರುತ್ತಾರೆ. ಹಿಂಸಾಬುದ್ಧಿಯಿಂದ ಕ್ರೋಧದಿಂದ ಒಬ್ಬರನ್ನೊಬ್ಬರು ಕೊಂದುಬಿಡುವ ಬಯಕೆಯಿಂದಲೇ ತುಂಬಿರುತ್ತಾರೆ. ಭಿಕ್ಷುಗಳೇ, ಬೇಟೆಗಾರನಿಗೆ ಬೇಟೆಯನ್ನು ನೋಡಿದಾಗ ಕೊಲ್ಲುವ ಬುದ್ಧಿ ಹುಟ್ಟುವಂತೆ ಈ ಜನರು ಪರಸ್ಪರ ಕೊಲ್ಲುವ ಬಯಕೆಯಿಂದ ತುಂಬಿರುತ್ತಾರೆ.

“ಹತ್ತು ವರ್ಷ ಆಯಸ್ಸಿನ ಈ ಜನರಿಗೆ ಒಂದುಕಾಲ ಬರುತ್ತದೆ. ಅವರ ಅವದಿ ಒಂದು ವಾರದಷ್ಟು ಮಾತ್ರ.13 ಆಗ ಅವರೆಲ್ಲಾ ಶಸ್ತ್ರ ಹಿಡಿದವರೇ ಆಗುತ್ತಾರೆ. ಒಬ್ಬನಿಗೆ ಮತ್ತೊಬ್ಬನು ಒಂದು ಪಶುವಿನಂತೆಯೇ ಕಾಣುತ್ತಾನೆ. ಅವರ ಕೈಯಲ್ಲಿ ತೀಕ್ಷ್ಣವಾದ ಶಸ್ತ್ರಗಳನ್ನು ಹಿಡಿದುಕೊಂಡು ‘ಇದೋ ಒಂದು ಪಶು, ಇದೋ ಮತ್ತೊಂದು ಪಶು’ ಎಂದು ಅಂದುಕೊಂಡು ಪರಸ್ಪರ ಜೀವವನ್ನು ತೆಗೆದುಬಿಡುತ್ತಾರೆ.

“ಭಿಕ್ಷುಗಳೇ, ಅವರಲ್ಲಿ ಕೆಲವರಿಗೆ ‘ನಾವು ಪರಸ್ಪರ ಕೊಲ್ಲುವುದು ಬೇಡ, ನಮ್ಮಿಂದಲೇ ನಾವು ಹತವಾಗುವುದು ಬೇಡ’ ಎಂದುಕೊಳ್ಳುತ್ತಾರೆ. ನಾವು ಹುಲ್ಲುಗಾವಲಿಗೋ, ವನಕ್ಕೋ, ಮರಗಳಿರುವ ಕಡೆಗೋ, ನದಿಗಳ ಹತ್ತಿರವಿರುವ ದುರ್ಗಗಳಿಗೋ, ಪರ್ವತಗಳ ಬಿರುಕುಗಳಿಗೋ ಹೋಗಿಬಿಡೋಣ. ಅಲ್ಲಿ ಸಿಕ್ಕುವ ಕಾಡಿನ ಗೆಡ್ಡೆ-ಗೆಣಸು ಹಣ್ಣುಗಳಿಂದಲೇ ಜೀವಿಸೋಣ’ ಎಂಬ ಭಾವನೆ ಬರುತ್ತದೆ. ಅವರು ಅಂಥ ಕಡೆಗಳಿಗೆ ಹೋಗಿ ತಾವಂದುಕೊಂಡಂತೆ ಕಾಡಿನ ಗೆಡ್ಡೆಗೆಣಸು ಹಣ್ಣುಗಳನ್ನು ತಿನ್ನಲಾರಂಭಿಸುತ್ತಾರೆ. ಹೀಗೆ ಏಳು ದಿನಗಳು ಮಾಡುತ್ತಾರೆ. ಏಳು ದಿನಗಳ ನಂತರ ಅವರು ಹುಲ್ಲುಗಾವಲಿನಿಂದ ವನದಿಂದ ಮರಗಳ ಪೊಟ್ಟರೆಯಿಂದ ನದಿಗಳ ಹತ್ತಿರದ ದುರ್ಗದಿಂದ ಪರ್ವತಗಳ ಬಿರುಕಿನಿಂದ ಹೊರಗೆ ಬರುತ್ತಾರೆ. ಪರಸ್ಪರ ಆಲಂಬಿಸಿಕೊಳ್ಳುತ್ತಾ ಒಬ್ಬರನ್ನೊಬ್ಬರು ಹೀಗೆ ಸಂತೈಸಿಕೊಳ್ಳುತ್ತಾರೆ- ‘ಏಳು ದಿನ ಬದುಕಿಬಿಟ್ಟೆವು, ಏಳು ದಿನದಷ್ಟು ಕಾಲ ಬದುಕಿಬಿಟ್ಟೆವು.’

ಆಯುವರ್ಣಾದಿಗಳ ವೃದ್ಧಿ

“ಆಗ ಆ ಜನರು ಹೀಗೆಂದುಕೊಳ್ಳುತ್ತಾರೆ- ‘ನಾವು ಅಕುಶಲ ಭಾವನೆಗಳಿಂದ ಕೂಡಿದ್ದವರಾಗಿದ್ದುದರಿಂದ ಹೀಗೆ ಜ್ಞಾತಿಕ್ಷಯವಾಯಿತು. ಇನ್ನಾದರೂ ನಾವು ಕುಶಲವಾದುದನ್ನು ಮಾಡೋಣ. ಕುಶಲವನ್ನು ಮಾಡುವುದು ಹೇಗೆ? ನಾವು ಪ್ರಾಣಿಹಿಂಸೆಯನ್ನು ತ್ಯಜಿಸೋಣ. ಕುಶಲವಾದ ಈ ಭಾವನೆಯನ್ನು ಬೆಳೆಸಿಕೊಳ್ಳೋಣ, ಅದರಂತೆ ಮಾಡೋಣ’. ಆಗ ಅವರೆಲ್ಲರೂ ಪ್ರಾಣಿಹಿಂಸೆಯನ್ನು ತ್ಯಜಿಸಿ ಕುಶಲ ಭಾವನೆಯನ್ನು ಬೆಳೆಸಿಕೊಳ್ಳುವುದರಲ್ಲಿ ಕುಶಲವನ್ನು ಮಾಡುವುದರಲ್ಲಿ ನಿರತರಾಗುತ್ತಾರೆ. ಹೀಗೆ ಕುಶಲ ಧಮ್ಮದಲ್ಲಿ ತೊಡಗಿದವರ ಅವರ ಆಯಸ್ಸೂ ಕಾಂತಿಯೂ ವರ್ಧಿಸುತ್ತವೆ. ಹೀಗೆ ಆಯಸ್ಸು ಮತ್ತು ಕಾಂತಿಯು ವರ್ಧಿಸಿದವರ ಮಕ್ಕಳ ಆಯಸ್ಸು ಹತ್ತು ವರ್ಷಗಳಿಂದ ಇಪತ್ತು ವರ್ಷಗಳಿಗೆ ಏರುತ್ತದೆ.

“ಆಮೇಲೆ, ಭಿಕ್ಷುಗಳೇ, ಆ ಜನರಿಗೆ ಈ ಭಾವನೆ ಬರುತ್ತದೆ- ‘ನಾವು ಕುಶಲವಾದ ಭಾವನೆಯನ್ನು ಬೆಳೆಸಿಕೊಂಡು ಕುಶಲವನ್ನು ಮಾಡಿದುದರಿಂದ ನಮ್ಮ ಆಯಸ್ಸೂ ಕಾಂತಿಯೂ ವರ್ಧಿಸಿವೆ. ನಾವು ಮತ್ತಷ್ಟು ಕುಶಲವನ್ನು ಮಾಡೋಣ. ಕುಶಲವಾದುದನ್ನು ಮಾಡುವುದು ಹೇಗೆ? ನಮಗೆ ಸೇರದುದನ್ನು ಸ್ವೀಕರಿಸದಿರೋಣ, ಕಾಮಗಳ ಮಿಥ್ಯಾಚಾರದಲ್ಲಿ ತೊಡಗದಿರೋಣ. ಸುಳ್ಳು, ಚಾಡಿ, ಕಠಿಣ ಮಾತುಗಳಾವುವನ್ನೂ ಆಡದಿರೋಣ. ದುರಾಸೆ, ಹಿಂಸಾಬುದ್ಧಿ, ಮಿಥ್ಯಾದೃಷ್ಟಿ ಇವುಗಳನ್ನು ಬಿಡೋಣ. ಅಧರ್ಮದಿಂದ ಕೂಡಿದವರಾಗಿ ಅತಿಯಾದ ಲೋಭ, ಮಿಥ್ಯಾಧರ್ಮ ಈ ಮೂರು ಭಾವನೆಗಳನ್ನು ತ್ಯಜಿಸೋಣ. ಮಾತಾಪಿತೃಗಳಲ್ಲಿ ಭಕ್ತಿಯನ್ನಿಡೋಣ. ಸಮಣರಲ್ಲೂ, ತಿಳಿದವರಲ್ಲೂ, ಕುಲಶ್ರೇಷ್ಠರಲ್ಲೂ ಗೌರವವನ್ನು ಬೆಳೆಸಿಕೊಳ್ಳೋಣ. ಹೀಗೆ ಕುಶಲವಾದ ಭಾವನೆಗಳನ್ನು ಬೆಳೆಸಿಕೊಂಡು ಕುಶಲವಾದುದನ್ನು ಮಾಡೋಣ.’ ಅವರು ಅದರಂತೆ ಮಾತಾಪಿತೃಗಳಲ್ಲಿ ಭಕ್ತಿಯನ್ನೂ, ಸಮಣರಲ್ಲಿಯೂ ತಿಳಿದವರಲ್ಲಿಯೂ ಕುಲಶ್ರೇಷ್ಠರಲ್ಲಿಯೂ ಗೌರವವನ್ನು ಬೆಳೆಸಿಕೊಂಡು ಕುಶಲವಾದುದರಲ್ಲಿ ನಿರತರಾಗುತ್ತಾರೆ.

“ಹೀಗೆ ಕುಶಲವಾದದ್ದರಲ್ಲಿ ನಿರತರಾದವರ ಆಯಸ್ಸೂ, ಕಾಂತಿಯೂ ವೃದ್ಧಿಹೊಂದಿದ ಈ ಜನರ ಮಕ್ಕಳ ಆಯಸ್ಸು ಇಪ್ಪತ್ತರಿಂದ ನಲವತ್ತು ವರ್ಷಗಳಿಗೆ ಏರುತ್ತದೆ. ನಲವತ್ತು ವರ್ಷ ಆಯಸ್ಸಿನವರ ಮಕ್ಕಳ ಆಯಸ್ಸು ಎಂಬತ್ತು ವರ್ಷಕ್ಕೂ, ಎಂಬತ್ತು ವರ್ಷ ಆಯಸ್ಸಿನವರ ಮಕ್ಕಳ ಆಯಸ್ಸು ನೂರಅರವತ್ತು ವರ್ಷಕ್ಕೂ ಇವರ ಮಕ್ಕಳ ಆಯಸ್ಸು ಮುನ್ನೂರ ಇಪ್ಪತ್ತು ವರ್ಷಕ್ಕೂ ಹೆಚ್ಚುತ್ತದೆ. ಮುನ್ನೂರ ಇಪ್ಪತ್ತು ವರ್ಷ ಆಯಸ್ಸಿನವರ ಮಕ್ಕಳ ಆಯುಸ್ಸು ಆರುನೂರ ನಲವತ್ತು ವರ್ಷಕ್ಕೂ, ಇವರ ಮಕ್ಕಳ ಆಯಸ್ಸು ಎರಡು ಸಾವಿರ ವರ್ಷಕ್ಕೂ, ಎರಡು ಸಾವಿರ ವರ್ಷ ಆಯಸ್ಸಿನವರ ಮಕ್ಕಳ ಆಯಸ್ಸು ನಾಲ್ಕು ಸಾವಿರ ವರ್ಷಕ್ಕೂ ಅವರ ಮಕ್ಕಳ ಆಯಸ್ಸು ಎಂಟು ಸಾವಿರಕ್ಕೂ ಹೆಚ್ಚಾಗುತ್ತದೆ. ಎಂಟು ಸಾವಿರ ವರ್ಷ ಆಯಸ್ಸಿನವರ ಮಕ್ಕಳ ಆಯಸ್ಸು ಇಪತ್ತು ಸಾವಿರ ವರ್ಷಕ್ಕೂ ಅವರ ಮಕ್ಕಳ ಆಯಸ್ಸು ನಲವತ್ತು ಸಾವಿರಕ್ಕೂ ಅವರ ಮಕ್ಕಳ ಆಯಸ್ಸು ಎಂಬತ್ತು ಸಾವಿರಕ್ಕೂ ಹೆಚ್ಚುತ್ತದೆ. ಎಂಬತ್ತು ಸಾವಿರ ವರ್ಷ ಆಯಸ್ಸಿನವರ ಹೆಣ್ಣು ಮಕ್ಕಳು ತಮ್ಮ ಐನೂರನೆಯ ವಯಸ್ಸಿಗೆ ಮೈನೆರೆಯುತ್ತಾರೆ.

ಸಂಖ ರಾಜನ ಉದಯ

“ಎಂಬತ್ತು ಸಾವಿರ ವರ್ಷ ಆಯಸ್ಸಿನವರಿಗೆ ಕೇವಲ ಮೂರು ಬಗೆಯ ವ್ಯಾಧಿಗಳು ಇರುತ್ತವೆ- ಇಚ್ಛೆ, ಹಸಿವು ಮತ್ತು ಜರ.14 ಎಂಬತ್ತು ಸಾವಿರ ವರ್ಷ ಆಯಸ್ಸಿನ ಜನಾಂಗಗಳಲ್ಲಿ ಈ ಜಂಬೂದ್ವೀಪವು ಬಹು ಶಕ್ತಿಯುತವಾಗುತ್ತದೆ, ಅತಿ ಶ್ರೀಮಂತರಾಗಿರುತ್ತದೆ. ಗ್ರಾಮ, ನಿಗಮ, ರಾಜಧಾನಿಗಳು ಪರಸ್ಪರ ಕೋಳಿಯು ಹಾರುವಷ್ಟು ಹತ್ತಿರಲದಲ್ಲಿರುತ್ತವೆ. ಕಾಡು ಸಸ್ಯ ಲತೆಗಳಿಂದ ತುಂಬಿರುವಂತೆ ಜಂಬೂದ್ವೀಪವು ಜನರಿಂದ ತುಂಬಿ ತುಳುಕಾಡುತ್ತಿರುತ್ತದೆ. ಎಂಬತ್ತು ಸಾವಿರ ಆಯಸ್ಸುಳ್ಳ ಜನರಿಂದಲೇ ತುಂಬಿರುವ ಪಟ್ಟಣಗಳಲ್ಲಿ ವಾರಣಾಸಿಯು ಕೇತುಮತಿ ಎಂಬ ಹೆಸರಿನಿಂದ ಶಕ್ತಿಯುತವೂ, ಸಂಪದ್ಯುಕ್ತವೂ ಬಹುಸಂಖ್ಯೆಯ ಜನರಿಂದಲೂ ಮನುಷ್ಯ ಗಡಣಗಳಿಂದಲೂ ತುಂಬಿರುತ್ತದೆ, ಸುಭಿಕ್ಷವಾಗಿರುತ್ತದೆ. ಈ ಜಂಬೂದ್ವೀಪದಲ್ಲಿ ಕೇತುಮತಿ ರಾಜಧಾನಿಯನ್ನೇ ಪ್ರಮುಖವಾಗುಳ್ಳ ಎಂಬತ್ತು ನಾಲ್ಕು ಸಾವಿರ ನಗರಗಳಿರುತ್ತವೆ. ಕೇತುಮತಿ ರಾಜಧಾನಿಯಲ್ಲಿ ಸಂಖ ಎಂಬ ರಾಜನು ಹುಟ್ಟುತ್ತಾನೆ. ಅವನು ಧಾರ್ಮಿಕನೂ, ಧರ್ಮರಾಜನೂ, ನಾಲ್ಕು ದಿಕ್ಕುಗಳನ್ನು ಗೆಲ್ಲುವ ಚಕ್ರವರ್ತಿಯೂ, ಜನಪದ ರಕ್ಷಕನೂ ಆಗುತ್ತಾನೆ. ಸಪ್ತರತ್ನಗಳಾದ ಚಕ್ರರತ್ನ, ಹಸ್ತಿರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ, ಗೃಹಪತಿ ರತ್ನ, ಪರಿಣಾಕ ರತ್ನಗಳು ಅವನಿಗಿರುತ್ತವೆ. ಶೂರರೂ, ವೀರರೂ, ವೈರಸೇನೆಯನ್ನು ಮರ್ಧಿಸಬಲ್ಲವರೂ ಆದ ಸಾವಿರಕ್ಕೂ ಮೀರಿದ ಮಕ್ಕಳು ಅವನಿಗಿರುತ್ತಾರೆ. ಸಾಗರ ಪರ್ಯಂತ ವಿಸ್ತರಿಸಿರುವ ಈ ಪೃಥ್ವಿಯನ್ನು ದಂಡ ಶಸ್ತ್ರಗಳಿಲ್ಲದೆ ಕೇವಲ ಧರ್ಮದಿಂದಲೇ ಗೆದ್ದು ಆಳುತ್ತಾನೆ.

ಮೈತ್ರೇಯ ಬುದ್ಧನ ಉದಯ

“ಭಿಕ್ಷುಗಳೇ, ಇಂದು ಸಮ್ಮಾಸಂಬುದ್ಧನೂ ಸುಗತನೂ ಆದ ನಾನಿರುವಂತೆ ಮೆತ್ತಯ್ಯ15 ಎಂಬ ಅರಹಂತನೂ ಸಮ್ಮಾಸಂಬುದ್ಧನೂ ವಿಜ್ಜಾಚರಣ ಸಂಪನ್ನನೂ ಲೋಕವಿದುವೂ ಅನುತ್ತರಪುರಿಸಧಮ್ಮ ಸಾರಥಿಯೂ ಸತ್ಥಾದೇವಮನುಸ್ಸಾನನೂ ಭಗವಂತನೂ ಆದ ಬುದ್ಧನು ಈ ಎಂಬತ್ತುನಾಲ್ಕು* ಸಾವಿರ ವರ್ಷ ಆಯಸ್ಸುಳ್ಳವರ ನಡುವೆ ಹುಟ್ಟುತ್ತಾನೆ. ಇಂದು ನಾನು ನನ್ನ ಪ್ರಯತ್ನದಿಂದಲೇ ಸಾಕ್ಷಾತ್ಕಾರ ಮಾಡಿಕೊಂಡು ದೇವತೆಗಳಿಂದಲೂ, ಮಾರರಿಂದಲೂ, ಬ್ರಹ್ಮರಿಂದಲೂ ಸಮಣ ಬ್ರಾಹ್ಮಣರಿಂದಲೂ, ಜನರಿಂದಲೂ, ದೇವಮಾರರಿಂದಲೂ ಕೂಡಿರುವ ಈ ಲೋಕದಲ್ಲಿ ಬೋಧಿಸುತ್ತಿರುವಂತೆ ಅವನೂ ಬೋಧಿಸುತ್ತಾನೆ. ಆದಿಯಲ್ಲಿ, ಮಧ್ಯದಲ್ಲಿ, ಅಂತ್ಯದಲ್ಲಿ ಕಲ್ಯಾಣವನ್ನುಂಟುಮಾಡುವ ಧಮ್ಮವನ್ನು ಅರ್ಥಪೂರ್ಣವಾಗಿ ಸಾರವತ್ತಾಗಿ ನಾನು ಬೋಧಿಸುವಂತೆ ಅವನೂ ಬೋಧಿಸುತ್ತಾನೆ. ನನ್ನ ಧಮ್ಮದಂತೆಯೇ ಅವನು ಬೋಧಿಸುವ ಧಮ್ಮವು ಪರಿಪೂರ್ಣವೂ, ಪರಿಶುದ್ಧವೂ, ಶ್ರೇಷ್ಠವಾದುದೂ ಆಗಿರುತ್ತದೆ. ನನ್ನನ್ನು ನೂರಾರು ಭಿಕ್ಷುಗಳ ಸಮೂಹವು ಅನುಸರಿಸುವಂತೆ ಮೆತ್ತಯ್ಯನನ್ನು ಸಾವಿರಾರು ಭಿಕ್ಷುಗಳ ಸಮೂಹವು ಅನುಸರಿಸುತ್ತದೆ.

“ಆಗ ಭಿಕ್ಷುಗಳೇ, ಸಂಖಚಕ್ರವರ್ತಿಯು ಮಹಿಪನಾದನೆಂಬ ರಾಜನು ಕಟ್ಟಿಸಿದಂಥ ಅರಮನೆಯನ್ನೇ16 ನಿರ್ಮಿಸುತ್ತಾನೆ. ಅಲ್ಲಿ ವಾಸಿಸಿ ಕೆಲಸಮಯದ ನಂತರ ಸಮಣ ಬ್ರಾಹ್ಮಣರಿಗೆ, ದರಿದ್ರರಿಗೆ, ಯಾಚಕರಿಗೆ, ಪಯಣಿಗರಿಗೆ ಅದನ್ನು ದಾನ ಮಾಡಿಬಿಡುತ್ತಾನೆ. ಆಮೇಲೆ ತನ್ನ ಗಡ್ಡ ಕೂದಲುಗಳನ್ನು ಕತ್ತರಿಸಿಹಾಕಿ ಕಾಷಾಯವಸ್ತ್ರವನ್ನು ಧರಿಸಿ ಮನೆಯನ್ನು ತೊರೆದು ಅನಗಾರಿಕ ಪಬ್ಬಜಿತನಾಗಿ ಮೆತ್ತಯ್ಯ ಭಗವಂತನಲ್ಲಿಗೆ ಹೋಗುತ್ತಾನೆ. ಪಬ್ಬಜಿತನಾದ ಮೇಲೆ ಏಕಾಕಿಯಾಗಿ ಬೇರೆಯವರಿಂದ ದೂರನಾಗಿ ಶ್ರದ್ಧಾವಂತನಾಗಿ, ಉತ್ಸಾಹಿತನಾಗಿ ಸಾಧನೆ ಮಾಡುತ್ತಾನೆ. ಯಾವುದಕ್ಕೋಸ್ಕರ ಕುಲಪುತ್ರರಾದವರು ಮನೆಯನ್ನು ತೊರೆದು ಅನಗಾರಿಕರಾಗಿ ಪಬ್ಬಜಿತರಾಗಿ ಸಾಧನೆ ಮಾಡುತ್ತಾರೋ ಆ ಧಮ್ಮವನ್ನು ಸಾಧಿಸುತ್ತಾನೆ. ಶ್ರೇಷ್ಠವಾದ ಬ್ರಹ್ಮಚರ್ಯದಲ್ಲಿ ನಿರತನಾಗುತ್ತಾನೆ. ತಾನೇ ಸಾಕ್ಷಾತ್ಕಾರ ಮಾಡಿಕೊಳ್ಳಬಲ್ಲ ಉತ್ಕೃಷ್ಟವಾದ ಜ್ಞಾನವನ್ನು ಪಡೆದು ಅದರಲ್ಲಿಯೇ ನಿರತನಾಗಿರುತ್ತಾನೆ.

“ಭಿಕ್ಷುಗಳೇ, ನಿಮಗೆ ನೀವೇ ದ್ವೀಪವಾಗಿ ನಿಮಗೆ ನೀವೇ ಶರಣು ಹೋಗಿ. ಅನ್ಯಕ್ಕೆ ಶರಣಾಗುವುದು ಬೇಡ. ಧರ್ಮವೇ ನಿಮಗೆ ದೀಪವಾಗಲಿ, ಧರ್ಮಕ್ಕೆ ಶರಣುಹೋಗಿ, ಅನ್ಯಕ್ಕೆ ಶರಣಾಗುವುದು ಬೇಡ. ಭಿಕ್ಷುಗಳೇ, ನಿಮಗೆ ನೀವೇ ದ್ವೀಪವಾಗಿ ಧಮ್ಮಕ್ಕೆ ಶರಣುಹೋಗಿ ಅನ್ಯಕ್ಕೆ ಶರಣಾಗದೆ ನಡೆದುಕೊಳ್ಳುವುದು ಹೇಗೆ? ಭಿಕ್ಷುವು ಕಾಯವನ್ನು ಅದರ ನಿಜಸ್ವರೂಪದಲ್ಲಿಯೇ ನೋಡುತ್ತಾನೆ, ಶ್ರದ್ಧೆಯಿಂದ ಕೂಡಿರುತ್ತಾನೆ. ಎಚ್ಚರಿಕೆಯನ್ನು ಪಾಲಿಸುತ್ತಿರುತ್ತಾನೆ. ಮನಸ್ಸಿನ ಮೇಲೆ ಹತೋಟಿಯನ್ನಿಟ್ಟುಕೊಂಡಿರುತ್ತಾನೆ. ವೇದನೆಯನ್ನು ಅದರ ನಿಜಸ್ವರೂಪದಲ್ಲಿಯೇ ನೋಡುತ್ತಾನೆ... ಚಿತ್ತವನ್ನು ಅದರ ನಿಜಸ್ವರೂಪದಲ್ಲಿಯೇ ನೋಡುತ್ತಾನೆ. ಧಮ್ಮವನ್ನು ಅದರ ನಿಜಸ್ವರೂಪದಲ್ಲಿಯೇ ನೋಡುತ್ತಾನೆ. ಶ್ರದ್ಧೆಯಿಂದ ಕೂಡಿರುತ್ತಾನೆ, ಎಚ್ಚರಿಕೆಯನ್ನು ಪಾಲಿಸುತ್ತಾನೆ. ಮನಸ್ಸಿನ ಮೇಲೆ ಹತೋಟಿಯನ್ನಿಟ್ಟುಕೊಂಡಿರುತ್ತಾನೆ. ಲೋಕದ ಮೇಲಿನ ವ್ಯಾಮೋಹವನ್ನು ತೊರೆದಿರುತ್ತಾನೆ. ಹೀಗೆ ತನಗೆ ತಾನೇ ದ್ವೀಪವಾಗುವ, ಧರ್ಮವನ್ನೇ ದ್ವೀಪವನ್ನಾಗಿ ಮಾಡಿಕೊಳ್ಳುವ ತನಗೇ ಶರಣು ಹೋಗುವ ಧರ್ಮಕ್ಕೆ ಶರಣು ಹೋಗುವ ಅನ್ಯಕ್ಕೆ ಶರಣಾಗದಂತೆ ಭಿಕ್ಷುವು ನಡೆದುಕೊಳ್ಳುತ್ತಾನೆ.

ಭಿಕ್ಖುಗಳ ಆಯುವರ್ಣಗಳ ವೃದ್ಧಿ

“ಭಿಕ್ಷುಗಳೇ, ನಿಮ್ಮ ಹಿರಿಯರು ರಕ್ಷಿಸಿರುವ ಗೋಗಾಡಿನಲ್ಲಿ ಸಂಚರಿಸಿ (ಅವರು ಅನುಸರಿಸಿದ ಒಳ್ಳೆಯ ಮಾರ್ಗದಲ್ಲಿ ಹೋಗಿ) ಹಾಗೆ ಆ ದಾರಿಯಲ್ಲಿಯೇ ನಡೆದು ಆಯಸ್ಸು ಕಾಂತಿ ಭೋಗ ಮತ್ತು ಬಲಗಳನ್ನು ಬೆಳೆಸಿಕೊಳ್ಳಿ.

“ಭಿಕ್ಷುಗಳೇ, ನೀವು ಹೇಗೆ ಆಯುಷ್ಮಂತರಾಗುತ್ತೀರಿ? ಭಿಕ್ಷುಗಳೇ, ಇಚ್ಛಾಶಕ್ತಿ ಮತ್ತು ಸಾಧನೆಗಳಿಂದ ಕೂಡಿದ ಸಮಾಧಿಯನ್ನೂ, ವೀರ್ಯ ಮತ್ತು ಸಾಧನೆಗಳಿಂದ ಕೂಡಿದ ಸಮಾಧಿಯನ್ನು ಮಾನಸಿಕ ಶಕ್ತಿ ಮತ್ತು ಸಾಧನೆಗಳಿಂದ ಕೂಡಿದ ಸಮಾಧಿಯನ್ನು ಮೀಮಾಂಸ ಮತ್ತು ಸಾಧನೆಗಳಿಂದ ಕೂಡಿದ ಸಮಾಧಿಯನ್ನು ಆಯುಷ್ಮಂತನಾದ ಭಿಕ್ಷುವು ಬೆಳೆಸಿಕೊಳ್ಳುತ್ತಾನೆ. ಹೀಗೆ ಇದ್ದಿಪಾದಗಳನ್ನು ಅತ್ಯುತ್ತಮವನ್ನಾಗಿ ಮಾಡಿ ಅದರಲ್ಲಿಯೇ ಹೋಗುವವನು ಒಂದು ಕಲ್ಪದಷ್ಟು ಕಾಲ ಅಥವಾ ಆ ಕಲ್ಪದಲ್ಲಿ ಉಳಿದಿರುವಷ್ಟು ಕಾಲ ಬದುಕಬಲ್ಲವನಾಗುತ್ತಾನೆ. ಹೀಗೆ ಅವನು ಆಯುಷ್ಮಂತನಾಗುತ್ತಾನೆ.

“ಭಿಕ್ಷುವು ವರ್ಣವಂತ ಅಥವಾ ಕಾಂತಿವಂತ ಹೇಗಾಗುತ್ತಾನೆ? ಅವನು ಶೀಲವಂತನಾಗಿಯೇ ಇರುತ್ತಾನೆ. ಪಾತಿಮೋಕ್ಖಗಳನ್ನು ಪಾಲಿಸುತ್ತಾನೆ. ಎಲ್ಲರೂ ಒಪ್ಪುವ ರೀತಿಯಲ್ಲಿಯೇ ನಡೆದುಕೊಳ್ಳುತ್ತಾನೆ. ವರ್ಜಿಸಬೇಕಾದದ್ದು ಯಾವುದಿದೆಯೋ ಅದರ ಅಣುವಿಗೂ ಭಯಪಡುತ್ತಾನೆ. ಯಾವ ನಿಯಮಗಳನ್ನು ತಪ್ಪದೆ ಪಾಲಿಸಬೇಕೋ ಅದನ್ನು ಪಾಲಿಸಿ ಸಾಧನೆಯಲ್ಲಿ ನಿರತನಾಗುತ್ತಾನೆ. ಹೀಗೆ ಅವನು ಕಾಂತಿವಂತನಾಗುತ್ತಾನೆ.

“ಭಿಕ್ಷು ಹೇಗೆ ಸುಖಿಯಾಗುತ್ತಾನೆ? ಕಾಮಗಳೆಲ್ಲವನ್ನೂ ತ್ಯಜಿಸಿ ಅಕುಶಲವಾದ ಭಾವನೆಗಳಿಂದ ದೂರನಾಗಿ ತರ್ಕ ಮತ್ತು ವಿಚಾರಗಳಿಂದ ಕೂಡಿದ ವಿವೇಕಪೂರಿತವಾದ ಪಠಮಝಾನದಲ್ಲಿ ಲೀನನಾಗಿರುತ್ತಾನೆ. ತರ್ಕ ವಿಚಾರಗಳನ್ನು ಉಪಶಮನ ಮಾಡಿಕೊಂಡು... ದುತಿಯ ಝಾನದಲ್ಲಿ ಲೀನನಾಗಿರುತ್ತಾನೆ... ತಿತಿಯ ಝಾನದಲ್ಲಿ ಲೀನನಾಗಿರುತ್ತಾನೆ... ಚುತುತ್ಥ ಝಾನದಲ್ಲಿ ಲೀನನಾಗಿರುತ್ತಾನೆ. ಹೀಗೆ ಭಿಕ್ಷುವು ಸುಖಿಯಾಗಿರುತ್ತಾನೆ.

“ಭಿಕ್ಷುವು ಹೇಗೆ ಭೋಗಿಯಾಗುತ್ತಾನೆ? ಭಿಕ್ಷುವು ಮೆತ್ತ ಭಾವನೆಯಿಂದ ತುಂಬಿದವನಾಗಿ ಒಂದು ದಿಕ್ಕಿನಲ್ಲಿ ಅದನ್ನು ಪ್ರಸರಿಸುತ್ತಾನೆ. ಎರಡನೆಯ ಮೂರನೆಯ ಮತ್ತು ನಾಲ್ಕನೆಯ ದಿಕ್ಕುಗಳಲ್ಲೂ ಪ್ರಸರಿಸುತ್ತಾನೆ. ಊರ್ಧ್ವಲೋಕ ಅಧೋಲೋಕ ತಿರ್ಯಕ್ ಲೋಕಗಳಿಗೆ ಎಲ್ಲ ಲೋಕಗಳಿಗೆ ಎಲ್ಲರ ಒಳ್ಳೆಯದಕ್ಕೋಸ್ಕರ ವಿಪುಲವಾದ ಮಹತ್ತಾದ ಮಹತ್ಪ್ರಮಾಣದ ಮೆತ್ತ ಭಾವನೆಯನ್ನು ಹರಿಸುತ್ತಾನೆ... ಕರುಣಾ ಭಾವನೆಯಿಂದ ತುಂಬಿದವನಾಗಿ... ಮುದಿತಾ ಭಾವನೆಯಿಂದ ತುಂಬಿದವನಾಗಿ... ಉಪೇಕ್ಖಾ ಭಾವನೆಯಿಂದ ತುಂಬಿದವನಾಗಿ ಅದನ್ನು ಒಂದು ದಿಕ್ಕಿನಲ್ಲಿ ಪ್ರಸರಿಸುತ್ತಾನೆ. ಎರಡನೆಯ ಮೂರನೆಯ ನಾಲ್ಕನೆಯ ದಿಕ್ಕುಗಳಲ್ಲಿ ಪ್ರಸರಿಸುತ್ತಾನೆ. ಊರ್ಧ್ವ ಅಧೋ ತಿರ್ಯಕ್ ಲೋಕಗಳಿಗೆ ಎಲ್ಲ ಲೋಕಗಳಿಗೆ ಎಲ್ಲರ ಒಳಿತಿಗಾಗಿ ವಿಪುಲವಾದ ಮಹತ್ತಾದ ಮಹತ್ಪ್ರಮಾಣದ ಉಪೇಕ್ಖಾ ಭಾವನೆಯನ್ನು ಹರಿಸುತ್ತಾನೆ. ವೈರ ಹಿಂಸಾಬುದ್ಧಿರಹಿತವಾದ ಈ ಭಾವನೆಗಳನ್ನು ಎಲ್ಲಕಡೆಗಳಲ್ಲೂ ಪ್ರಸರಿಸುತ್ತಾನೆ. ಹೀಗೆ ಭಿಕ್ಷುವು ಭೋಗಿಯಾಗುತ್ತಾನೆ.

“ಭಿಕ್ಷುವು ಹೇಗೆ ಬಲಿಷ್ಠನಾಗುತ್ತಾನೆ? ಆಸವಗಳೆಲ್ಲವನ್ನೂ ಕಳೆದುಕೊಂಡು ಅನಾಸವನಾಗಿ ಚೇತೋವಿಮುಕ್ತಿ ಪಞ್ಞಾವಿಮುಕ್ತಿಗಳನ್ನು ಪಡೆದು ತಾನೇ ಸಾಕ್ಷಾತ್ಕಾರ ಮಾಡಿಕೊಳ್ಳಬಲ್ಲ ಶ್ರೇಷ್ಠವಾದ ಅರಿವನ್ನೂ ಪಡೆಯುತ್ತಾನೆ. ಧಮ್ಮವನ್ನೂ ಸಾಧಿಸುತ್ತಾನೆ. ಹೀಗೆ ಅವನು ಬಲಿಷ್ಠನಾಗುತ್ತಾನೆ.

“ಭಿಕ್ಷುಗಳೇ, ದಮಿಸಲು ಕಷ್ಟವಾದ ಮಾರನ ಬಲವನ್ನು ದಮನ ಮಾಡುವ ಮತ್ತಾವ (ಇದನ್ನು ಬಿಟ್ಟು) ಬಲವೂ ಇಲ್ಲ. ಕುಶಲವಾದ ಧರ್ಮ ಹೀಗೆ ಪುಣ್ಯವನ್ನು ಬೆಳೆಸುತ್ತದೆ.”

ಭಗವಾನರು ಹೀಗೆ ಹೇಳಿದರು. ಭಗವಾನರು ಹೇಳಿದುದನ್ನು ಭಿಕ್ಷುಗಳು ಕೇಳಿ ಆನಂದಿತರಾದರು, ಸಂತೋಷಗೊಂಡರು.

ಇಲ್ಲಿಗೆ ಚಕ್ಕವತ್ತಿ ಸುತ್ತ ಮುಗಿಯಿತು.