ಅಂಬಟ್ಠಸುಟ್ಟ
ಅಂಬಟ್ಠ ಸುತ್ತ
ಹೀಗೆ ಕೇಳಿದ್ದೇನೆ: ಒಮ್ಮೆ ಭಗವಾನರು ಐದುನೂರು ಭಿಕ್ಷುಗಳ ದೊಡ್ಡ ಸಮೂಹದೊಂದಿಗೆ ಕೋಸಲದಲ್ಲಿ ಪ್ರವಾಸ ಮಾಡುತ್ತಿದ್ದಾಗ ಆ ರಾಜ್ಯದಲ್ಲಿನ ಇಚ್ಚಾನಂಗಲವೆಂಬ ಬ್ರಾಹ್ಮಣ ಗ್ರಾಮಕ್ಕೆ ಬಂದರಂತೆ; ಅಲ್ಲಿ ಇಚ್ಚಾನಂಗಲ ವನದಲ್ಲಿ ತಂಗಿದರಂತೆ.
ಪೋಕ್ಖರಸಾತಿಯ ಕ್ಷೇತ್ರ
ಆ ಸಮಯದಲ್ಲಿ ಪೋಕ್ಖರಸಾತಿ ಎಂಬ ಬ್ರಾಹ್ಮಣನು ಉಕ್ಕಟ್ಠ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದನು. ಆ ಗ್ರಾಮವು ರಾಜನ ಸ್ವಂತ ಉಪಯೋಗಕ್ಕೆ ಮೀಸಲಾಗಿದ್ದು (ರಾಜಭೋಗ್ಗಂ) ಜಲ ಜನ ಧಾನ್ಯಗಳಿಂದಲೂ ಹುಲ್ಲುಗಾವಲುಗಳಿಂದಲೂ ಸಮೃದ್ಧವಾಗಿತ್ತು. ಕೋಸಲದ ರಾಜ ಪಸೇನದಿ ಯಿಂದ ಅದು ದಾನವಾಗಿ ಕೊಡಲ್ಪಟ್ಟಿತು. ದಾನವಾಗಿ ತೆಗೆದು ಕೊಂಡವನು ರಾಜನು (ರಾಜದಾಯ ಬ್ರಹ್ಮದೆಯ್ಯಾಂ) ಪಡೆಯುತ್ತಿದ್ದ ಎಲ್ಲ ಆದಾಯವನ್ನು ಪಡೆಯಬಹುದಾಗಿತ್ತು. ಆಗ ಬ್ರಾಹ್ಮಣ ಪೊಕ್ಕಾರಸತಿಯು ಈ ಸುದ್ದಿಯನ್ನು ಕೇಳಿದನು. “ಶಾಕ್ಯಪುತ್ರನಾದ ಶಾಕ್ಯ ಕುಲವನ್ನು ತ್ಯಜಿಸಿ ಸಮಣನಾಗಿರುವ ಗೋತಮನು ಐನೂರು ಭಿಕ್ಷುಗಳ ದೊಡ್ಡ ಸಮೂಹದೊಂದಿಗೆ ಕೋಸಲದಲ್ಲಿ ಪ್ರವಾಸ ಮಾಡುತ್ತಿದ್ದು ಇಚ್ಚಾನಂಗಲಕ್ಕೆ ಬಂದಿದ್ದು ಅಲ್ಲಿನ ಇಚ್ಚಾನಂಗಲವನದಲ್ಲಿ ತಂಗಿದ್ದಾರೆ. ಗೋತಮ ಭಗವಾನರ ಬಗೆಗೆ ಈ ಸತ್ಕೀರ್ತಿಯು ಎಲ್ಲೆಲ್ಲಿಯೂ ಹರಡಿದೆ. ಅವರು ಅರಹಂತರು ಸಮ್ಮಾ ಸಂಬುದ್ಧರು ವಿಜ್ಜಾಚರಣಸಂಪನ್ನರು ಸುಗತರು ಲೋಕಗಳೆಲ್ಲವನ್ನೂ ತಿಳಿದವರು ಎಲ್ಲಾ ಜನರಿಗೆ ಮಾರ್ಗದರ್ಶಕರಲ್ಲಿ ಅತ್ಯಂತ ಶ್ರೇಷ್ಠರಾದವರು. ದೇವಮಾನವರಿಗಳಿಗೆಲ್ಲಾ ಗುರುವಾದವರು ಬುದ್ಧರು ಭಗವಾನರು! ತಮ್ಮ ಸಾಧನೆಯಿಂದಲೇ ಈ ಲೋಕವನ್ನೂ ದೇವಲೋಕವನ್ನೂ ಮಾರ ಲೋಕವನ್ನೂ, ಬ್ರಹ್ಮಲೋಕವನ್ನೂ, ಸಮಣ ಬ್ರಾಹ್ಮಣರು ಇರುವ ಲೋಕಗಳನ್ನೂ ಸ್ಪಷ್ಟವಾಗಿ ನೋಡಬಲ್ಲವರಾಗಿದ್ದಾರೆ. ಇತರರಿಗೂ ತಿಳಿಸಬಲ್ಲವರಾಗಿದ್ದಾರೆ. ಆದಿಯಲ್ಲಿ ಮಧ್ಯದಲ್ಲಿ ಅಂತ್ಯದಲ್ಲಿ ಕಲ್ಯಾಣಕರವಾದ ಧಮ್ಮವನ್ನು ಬೋಧಿಸುತ್ತಾರೆ. ಅರ್ಥಪೂರ್ಣವಾಗಿರುವ ಭಾವ ಪೂರ್ಣ ಸರ್ವ ರೀತಿಯಲ್ಲಿಯೂ ಪೂರ್ಣವಾಗಿರುವ ಪರಿಶುದ್ಧವಾದ ಬ್ರಹ್ಮಚರ್ಯವನ್ನು ಅವರು ಪ್ರಕಾಶ ಪಡಿಸಿದ್ದಾರೆ. ಅರಹಂತರಾದ ಅವರನ್ನು ದರ್ಶನ ಮಾಡುವುದು ಸಾಧುವಾದುದು”
ಬ್ರಾಹ್ಮಣ ಯುವಕ ಅಂಬಟ್ಠ
ಆ ಸಮಯದಲ್ಲಿ ಪೋಕ್ಖರಸಾತಿ ಬ್ರಾಹ್ಮಣನಿಗೆ ಅಂಬಟ್ಠನೆಂಬ ಯುವಕನು ಆತ್ಮೀಯ ಶಿಷ್ಯನಾಗಿದ್ದನು. ಅವನು ಮೂರು ವೇದಗಳನ್ನು ಕಂಠಪಾಠ ಮಾಡಿ ಪಠನ ಮಾಡುವವನೂ ಅಕ್ಷರಗಳಲ್ಲಿ ಸಲ್ಪ ವ್ಯತ್ಯಾಸವಿದ್ದರೂ ಅದನ್ನು ತಿಳಿಯಬಲ್ಲವನೂ ಇತಿಹಾಸವನ್ನು ತಿಳಿದವನು, ಪಾರಂಗತನು, ವ್ಯಾಕರಣಿಯೂ, ಲೋಕಾಯತ ಮಹಾಪುರಷರ ಲಕ್ಷಣಗಳನ್ನು ತಿಳಿದವನೂ ಅನುಜ್ಞಾತ, ಪಟಿಜ್ಞಾತನೂ(?) ತನ್ನ ಆಚಾರ್ಯನಂತೆಯೇ ಮೂರು ವೇದಗಳನ್ನು ಪ್ರವಚನ ಮಾಡಬಲ್ಲವನೂ ಆಗಿದ್ದನು. ಅವನ ಆಚಾರ್ಯನು ಅವನಿಗೆ ಹೀಗೆ ಹೇಳುತ್ತಿದ್ದನು “ ನನಗೆ ಏನು ಗೊತ್ತಿದೆಯೋ ಅದು ನಿನಗೂ ಗೊತ್ತಿದೆ. ನಿನಗೇನು ತಿಳಿದಿದೆಯೋ ಅಷ್ಟೇ ನನಗೂ ತಿಳಿದಿದೆ”
ಆಗ ಪೋಕ್ಖರಸಾತಿ ಬ್ರಾಹ್ಮಣನು ಯುವಕ ಅಂಬಟ್ಠನನ್ನು ಕರೆದು “ಮಗೂ ಅಂಬಟ್ಠ, ಶಾಕ್ಯಪುತ್ರನಾದ ಶಾಕ್ಯಕುಲವನ್ನು ತ್ಯಜಿಸಿ ಸಮಣ ನಾಗಿರುವ ಗೋತಮರು ಐನೂರು ಭಿಕ್ಷುಗಳ ದೊಡ್ಡ ಸಮೂಹದೊಂದಿಗೆ ಕೋಸಲದಲ್ಲಿ ಪ್ರವಾಸ ಮಾಡುತ್ತಿದ್ದು ಇಚ್ಛಾನಂಗಲಕ್ಕೆ ಬಂದಿದ್ದು ಅಲ್ಲಿನ ಇಚ್ಛಾನಂಗಲ ವನದಲ್ಲಿ ತಂಗಿದ್ದಾರೆ. ಗೋತಮರ ಬಗೆಗೆ ಈ ಸತ್ಕೀರ್ತಿಯು ಹರಡಿದೆ- ‘ಅರಹಂ, ಸಮ್ಮಾಸಂಬುದ್ಧೋ, ವಿಜ್ಜಾಚರಣ ಸಂಪನ್ನೋ, ಸುಗತೋ, ಲೋಕವಿದೂ ಅನುತ್ತರ ಪುರಿಸದಮ್ಮ ಸಾರಥಿ, ಸತ್ಥಾ ದೇವ ಮನುಸ್ಸಾನಂ, ಬುದ್ಧೋ, ಭಗವಾ7 ಅವರು ತಮ್ಮ ಸಾಧನೆಯಿಂದಲೇ ಈ ಲೋಕವನ್ನೂ ದೇವಲೋಕವನ್ನೂ, ಮಾರಲೋಕವನ್ನೂ, ಬ್ರಹ್ಮಲೋಕವನ್ನೂ, ಸಮಣ ಬ್ರಾಹ್ಮಣರು ಇರುವ ಲೋಕಗಳನ್ನು, ಪ್ರಜಾ ಲೋಕವನ್ನು, ದೇವಮಾನವ ಲೋಕಗಳನ್ನೂ ಸ್ವಷ್ಟವಾಗಿ ನೋಡಬಲ್ಲವರಾಗಿದ್ದಾರೆ. ಇತರರಿಗೂ ತಿಳಿಸಬಲ್ಲವರಾಗಿದ್ದಾರೆ. ಆದಿಯಲ್ಲಿ ಮಧ್ಯದಲ್ಲಿ ಅಂತ್ಯದಲ್ಲಿ ಕಲ್ಯಾಣನ್ನುಂಟು ಮಾಡುವ ಧಮ್ಮವನ್ನು ಬೋಧಿಸುತ್ತಾರೆ. ಅರ್ಥಪೂರ್ಣವಾಗಿರುವ ಭಾವ ಪೂರ್ಣವಾದ ಸರ್ವ ರೀತಿಯಲ್ಲಿಯೂ ಪೂರ್ಣವಾಗಿರುವ ಪರಿಶುದ್ಧವಾದ ಬ್ರಹ್ಮಚರ್ಯವೇ ಆಗಿರುವ ಧಮ್ಮವನ್ನು ಅವರು ಪ್ರಕಾಶ ಪಡಿಸಿದ್ದಾರೆ. ಅರಹಂತರಾದ ಅವರನ್ನು ದರ್ಶನ ಮಾಡುವುದು ಸಾಧುವಾದುದು. ಆದ್ದರಿಂದ, ಮಗೂ ಅಂಬಟ್ಠ, ನೀನು ಸಮಣ ಗೋತಮನ ಹತ್ತಿರಕ್ಕೆ ಹೋಗು. ಹೋಗಿ ಭಗವಂತ ಗೋತಮನು ಹೇಗಿದ್ದಾನೆಂದು ಜನ ಹೇಳುತ್ತಾರೆಯೋ ಹಾಗೆಯೇ ಇದ್ದಾನೆಯೋ, ಅಥವಾ ಹಾಗಿಲ್ಲವೋ, ಜನ ಹೇಳುವಂತೆಯೇ ಆತನು ಕಾಣುತ್ತಾನೋ ಅಥವಾ ಹಾಗೆ ಕಾಣುವುದಿಲ್ಲವೋ ಎಂಬುದನ್ನು ತಿಳಿ. ಗೋತಮನು ನಿನಗೆ ಹೇಗೆ ಕಾಣುತ್ತಾನೋ ಹೇಳು. ನಾವು ತಿಳಿದುಕೋಳ್ಳೋಣ.
“ಭಗವಂತ ಗೋತಮನು ಜನ ಹೇಗಿದ್ದಾನೆಂದು ಹೇಳುತ್ತಾರೆಯೇ ಆತನು ಹಾಗೆಯೇ ಇದ್ದಾನೆಯೇ ಅಥವಾ ಇಲ್ಲವೋ ಜನ ಹೇಳುವಂತೆಯೇ ಆತನು ಕಾಣುತ್ತಾನೋ ಅಥವ ಇಲ್ಲವೋ ಅದನ್ನು ತಿಳಿಯುವುದು ಹೇಗೆ?”
“ಮಗು ಅಂಬಟ್ಠ ಬಹುಕಾಲ ಹಿಂದೆಯೇ ನಮಗೆ ಬಂದಿರುವ ಮಂತ್ರಗಳಲ್ಲಿ ಮಹಾಪುರಷಗಿರಬೇಕಾದ ಮೂವತ್ತೆರಡು ಲಕ್ಷಣಗಳು ಇವೆ. ಮೂವತ್ತೆರಡು ಲಕ್ಷಣಗಳು ಯಾವನಿಗಿರುತ್ತದೆಯೋ ಆತನು ಈ ಎರಡರಲ್ಲಿ ಒಂದು ಸ್ಥಿತಿಯನ್ನು ಪಡೆಯುತ್ತಾನೆ. ಬೇರೆ ಯಾವುದೂ ಅಲ್ಲ. ಆತನು ಗೃಹಸ್ಥನಾದರೆ ರಾಜನಾಗಿ (ಹುಟ್ಟಿ) ಧಾರ್ಮಿಕನೂ ಧರ್ಮರಾಜನೂ ನಾಲ್ಕು ಸಮುದ್ರಗಳವರೆಗಿರುವುದನ್ನೆಲ್ಲಾ ಜಯಿಸುವವನೂ ಜನಪದ ಸಂಪತ್ತನ್ನು ರಕ್ಷಿಸುವವನೂ ಸಪ್ತರತ್ನಗಳನ್ನು ಹೊಂದಿರುವವನೂ ಆದ ಚಕ್ರವರ್ತಿ ಯಾಗುತ್ತಾನೆ. ಈ ಸಪ್ತ ರತ್ನಗಳಾವುವೆಂದರೆ - ಚಕ್ರರತ್ನ, ಹಸ್ತಿರತ್ನ, ಅಶ್ಪರತ್ನ, ಮಣಿರತ್ನ, ಸ್ರ್ತೀರತ್ನ, ಗೃಹಪತಿ ರತ್ನ ಮತ್ತು ಪರಿಣಾಯಕರತ್ನ8 ಅವನಿಗೆ ಶೂರರು ವೀರರೂ ಪರಸೇನೆಯನ್ನು ಗೆಲ್ಲುವವರೂ ಆದ ಸಾವಿರ ಪುತ್ರರಿರುತ್ತಾರೆ. ಆತನು ಸಾಗರ ಪರಿಯಂತೆ ಇರುವ ಈ ಪೃಥ್ವಿಯನ್ನು ದಂಡ ಶಸ್ತ್ರಗಳಿಲ್ಲದೆ ಕೇವಲ ಧರ್ಮದಿಂದಲೇ ಗೆದ್ದು ರಾಜ್ಯವಾಳುತ್ತಾನೆ. ಹಾಗಲ್ಲದೆ ಆತನು ಮನೆಯನ್ನು ತೊರೆದು ಅನಗಾರಿಕನಾದರೆ ಲೋಕವನ್ನು ಕವಿದಿರುವ ಅಜ್ಞಾನ ತೆರೆಯುವ ಸಮ್ಮಾಸಂಬುದ್ಧನೂ ಅರಹಂತನೂ ಆಗುತ್ತಾನೆ. ಮಂತ್ರವನ್ನು ನಾನು ಹೇಳಿಕೊಟ್ಟಿರುವೆ. ಮಗೂ ಅಂಬಟ್ಠ, ನೀನು ಮಂತ್ರವನ್ನು ಪರಿಗ್ರಹಿಸಿದ್ದೀಯೇ.”
“ಹಾಗೆಯೇ ಆಗಲಿ” ಎಂದು ಯುವಕ ಅಂಬಟ್ಠನು ತನ್ನ ಆಸನದಿಂದೆದ್ದು ಪೊಕ್ಖರಸಾತಿ ಬ್ರಾಹ್ಮಣನಿಗೆ ಅಭಿವಂದಿಸಿ ಪ್ರದಕ್ಷಿಣೆ ಮಾಡಿ ಅಶ್ವ ರಥವನ್ನೇರಿ ಬಹುಜನ ಯುವಕ ಬ್ರಾಹ್ಮಣರೊಂದಿಗೆ ಇಚ್ಚಾನಂಗಲವನಕ್ಕೆ ಹೋದನು. ಎಲ್ಲಿಯವರೆಗೆ ವಾಹನದಲ್ಲಿ ಹೋಗಬಹುದೋ ಅಲ್ಲಿಯವರೆಗೆ ವಾಹನದಲ್ಲಿ ಹೋಗಿ ಆಮೇಲೆ ವಾಹನದಿಂದ ಇಳಿದು ನಡೆದು ಆರಾಮವನ್ನು (ಭಿಕ್ಷುಗಳು ತಂಗುವ ಕಟ್ಟಡ) ಪ್ರವೇಶಿಸಿದನು. ಆ ಸಮಯದಲ್ಲಿ ಅನೇಕ ಭಿಕ್ಷುಗಳು ವನದಲ್ಲಿ ಸುತ್ತಾಡುತ್ತಿದ್ದರು ಯುವಕ ಅಂಬಟ್ಠನು ಆ ಭಿಕ್ಷುಗಳ ಹತ್ತಿರಕ್ಕೆ ಹೋದನು. ಅವರನ್ನು ಸಮೀಪಿಸಿ ಭಿಕ್ಷುಗಳನ್ನು ಹೀಗೆ ಕೇಳಿದನು. “ಈಗ ಗೋತಮನು ಎಲ್ಲಿ ವಿಹರಿಸುತ್ತಿದ್ದಾನೆ? ನಾವು ಗೋತಮನ ದರ್ಶನಕ್ಕಾಗಿ ಇಲ್ಲಿಗೆ ಬಂದಿದ್ದೇವೆ.”
ಆಗ ಭಿಕ್ಷುಗಳಿಗೆ ಹೀಗೆನ್ನಿಸಿತು- “ಯುವಕ ಅಂಬಟ್ಠನು ಹೆಸರಾಂತ ಕುಲಕ್ಕೆ ಸೇರಿದವನಾಗಿ ತಾನೂ ಹೆಸರುವಾಸಿಯಾಗಿದ್ದಾನೆ ಮತ್ತು ಪ್ಖೊಕರಸಾತಿ ಬ್ರಾಹ್ಮಣನ ಆಪ್ತ ಶಿಷ್ಯನಾಗಿದ್ದಾನೆ. ಭಗವಾನರು ಈ ಕುಲ ಪುತ್ರನೊಂದಿಗೆ ಸಲ್ಲಾಪ ಮಾಡುವುದು ಕಷ್ಟವಾಗುವುದಿಲ್ಲ.” ಅವರು ಅಂಬಟ್ಠನನ್ನು ಕುರಿತು ಹೀಗೆಂದರು: “ಅಂಬಟ್ಠ, ಬಾಗಿಲು ಮುಚ್ಚಿರುವ ವಿಹರದ ಹತ್ತಿರಕ್ಕೆ ಸದ್ದಿಲ್ಲದೆ ಹೋಗಿ ಮೌನವಾಗಿ ಕೈಸಾಲೆಯನ್ನು ಪ್ರವೇಶಿಸಿ ಮೃದುವಾಗಿ ಕೆಮ್ಮಿ ಬಾಗಿಲನ್ನು ಸಣ್ಣದಾಗಿ ಬಡಿ, ಭಗವಾನರು ಬಾಗಿಲನ್ನು ತೆರೆಯುತ್ತಾರೆ.”
ಅದರಂತೆ ಯುವ ಅಂಬಟ್ಠನು ಬಾಗಿಲು ಮುಚ್ಚಿದ್ದ ವಿಹಾರದ ಸಮೀಪಕ್ಕೆ ಸದ್ದಿಲ್ಲದೆ ಹೋಗಿ ಕೈಸಾಲೆಯನ್ನು ಮೌನವಾಗಿ ಪ್ರವೇಶಿಸಿ ಮೃದುವಾಗಿ ಕೆಮ್ಮಿ ಬಾಗಿಲನ್ನು ಸಣ್ಣದಾಗಿ ಬಡಿದನು. ಭಗವಾನರು ಬಾಗಿಲನ್ನು ತೆರೆದರು. ಯುವಕ ಅಂಬಟ್ಠನು ಪ್ರವೇಶಿಸಿದನು. ಇತರೆ ಯುವಕರೂ ಪ್ರವೇಶಿಸಿ ಭಗವಾನರಿಗೆ ಕುಶಲ ಪ್ರಶ್ನೆಮಾಡಿ ಗೌರವ ತೋರಿಸಿ ಒಂದುಕಡೆ ಕುಳಿತುಕೊಂಡರು. ಯುವಕ ಅಂಬಟ್ಠನಾದರೋ ಚಡಪಡಿಸುತ್ತಾ ಭಗವಾನರಿಗೆ ಇಲ್ಲದ್ದು ಸಲ್ಲದ್ದನ್ನು ಹೇಳಿದನು. ಕುಳಿತುಕೊಂಡಿದ್ದ ಭಗವಾನರ ಹತ್ತಿರ ನಿಂತುಕೊಂಡನು. ಆಗ ಭಗವಾನರು ಯುವಕ ಅಂಬಟ್ಠನಿಗೆ ಹೀಗೆ ಹೇಳಿದರು:
“ಅಂಬಟ್ಠ, ನಾನು ಕುಳಿತಿರುವಾಗ ನೀನು ಚಡಪಡಿಸುತ್ತಿರುವೆ. ನಿಂತುಕೊಂಡೇ ಇಲ್ಲದ್ದು ಸಲ್ಲದ್ದು ಮಾತನಾಡುತ್ತಿರುವೆ. ಹೀಗೆಯೇ ವೃದ್ದರಾದ ಬ್ರಾಹ್ಮಣರೊಡನೆಯೂ ಆಚಾರ್ಯರೊಡನೆಯೂ ಆಚಾರ್ಯರ ಆಚಾರ್ಯ ರೊಡನೆಯೂ ನಡೆದುಕೊಳ್ಳುತ್ತೀಯಾ?”
ಮೊದಲನೆಯ ಅಗೌರವದ ಮಾತು
“ಖಂಡಿತ ಇಲ್ಲ, ಗೋತಮ ನಡೆದು ಹೋಗುತ್ತಿರುವ ಬ್ರಾಹ್ಮಣರೊಂದಿಗೆ ಮಾತ್ರ ನಡೆದುಕೊಂಡು ಸಲ್ಲಾಪ ಮಾಡುವುದು ಸರಿಯಾದುದು. ನಿಂತುಕೊಂಡಿರುವ ಬ್ರಾಹ್ಮಣರೊಂದಿಗೆ ನಿಂತುಕೊಂಡೇ ಸಲ್ಲಾಪ ಮಾಡುವುದು ಸರಿಯಾದುದು. ಕುಳಿತುಕೊಂಡಿರುವ ಬ್ರಾಹ್ಮಣರೊಂದಿಗೆ, ಓ ಗೋತಮ, ಕುಳಿತುಕೊಂಡೇ ಸಲ್ಲಾಪ ಮಾಡುವುದು ಸರಿಯಾದುದು. ಮಲಗಿರುವ ಬ್ರಾಹ್ಮಣರೊಂದಿಗೆ ಮಲಗಿಯೇ ಸಲ್ಲಾಪಮಾಡುವುದು ಸರಿಯಾದುದು. ಆದರೆ, ಓ ಗೋತಮ, ಮುಂಡಕರೂ ಸಮಣರೂ ಜೀತದಾಳುಗಳು ಕಪ್ಪು ಜನರು ಬ್ರಹ್ಮಪಾದಗಳಿಂದ ಹುಟ್ಟಿದವರೂ (ಶೂದ್ರ) ಆದವರೊಂದಿಗೆ ಗೋತಮನಾದ ನಿನ್ನೊಂದಿಗೆ ಮಾತನಾಡುವಂತೆಯೇ ಆಡುತ್ತೇನೆ”.
“ಅಂಬಟ್ಠ, ಇಲ್ಲಿಗೆ ಏನನ್ನೊ ಬಯಸಿ ಬಂದಿರುವವನು ನೀನು, ಯಾವುದಕ್ಕೋಸ್ಕರ ಇಲ್ಲಿಗೆ ಬಂದಿದ್ದೀಯೇ ಅದರ ಕಡೆಗೆ ಮನಸ್ಸು ಕೊಡುವುದು ಸಾಧುವಾದದು. ಆದರೆ ಈ ಯುವಕ ಅಂಬಟ್ಠ ಸರಿಯಾದ ನಡವಳಿಕೆಯನ್ನು ಕಲಿತಿಲ್ಲ. ಸರಿಯಾದ ನಡವಳಿಕೆಯನ್ನು ಕಲಿಯದವನಿಂದ ಬೇರೇನು ದೊರೆಯುತ್ತದೆ!”
ಯುವಕ ಅಂಬಟ್ಠನು ತನ್ನನ್ನು ಸರಿಯಾದ ನಡವಳಿಕೆಯಿಲ್ಲದವನೆಂದು ಹೇಳಿದ ಭಗವಾನರ ಬಗೆಗೆ ಕುಪಿತನಾದನು; ಕೆಟ್ಟ ಬಾವನೆಯುಳ್ಳವನಾದನು. ‘ಈ ಭಗವಂತನು ಖಂಡನೀಯನು, ಈ ಭಗವಂತನು ಗೌರವಕ್ಕೆ ಅನರ್ಹನಾದವನು, ಈ ಭಗವಂತನು ಕೆಟ್ಟ ಮಾತುಗಳಿಂದಲೇ ಕರೆಯಲ್ಪಡಬೇಕಾದವನು’ ಎಂದು ಅಂದುಕೊಂಡು “ಸಮಣ ಗೋತಮನು ಪಾಪಿಯಾಗಿ ಹುಟ್ಟುತ್ತಾನೆ. ಏ ಗೋತಮ, ಶಾಕ್ಯ ಜಾತಿಯು ಬಹಳ ಕೆಟ್ಟುದು; ಶಾಕ್ಯ ಜಾತಿಯ ಅನಾಗರಿಕವಾದುದು; ಶಾಕ್ಯ ಜಾತಿಯು ಬೇಗ ಉದ್ರೇಕಗೊಳ್ಳು ವಂಥದು; ಶಾಕ್ಯ ಜಾತಿಯ ಪರರಿಗೆ ಹಿಂಸೆ ಮಾಡುವಂಥದು. ಸೇವಕರಾಗಿರಬೇಕಾದ ಸೇವಕರ ಸಮಾನರಾದ ಶಾಕ್ಯರು ಬ್ರಾಹ್ಮಣನನ್ನು ಆದರಿಸುವುದಿಲ್ಲ, ಬ್ರಾಹ್ಮಣನಿಗೆ ಗೌರವ ಕೊಡುವುದಿಲ್ಲ. ಬ್ರಾಹ್ಮಣನಿಗೆ ಮಾನ್ಯ ಮಾಡುವುದಿಲ್ಲ, ಬ್ರಾಹ್ಮಣನನ್ನು ಪೂಜಿಸುವುದಿಲ್ಲ, ಬ್ರಾಹ್ಮಣನನ್ನು ಉಪಚರಿಸುವುದಿಲ್ಲ, ಏ ಗೋತಮ, ಎಲ್ಲಾ ಶಾಕ್ಯರಂತೆಯೇ ಖಂಡನೀಯರಾದ ಇಲ್ಲಿರುವ ಶಾಕ್ಯರೂ ಸೇವಕರಾಗಿರಬೇಕಾದವರು, ಸೇವಕ ಸಮಾನರು. ಅವರು ಬ್ರಾಹ್ಮಣರನ್ನು ಆದರಿಸುವುದಿಲ್ಲ, ಬ್ರಾಹ್ಮಣನಿಗೆ ಗೌರವ ಕೊಡುವುದಿಲ್ಲ. ಬ್ರಾಹ್ಮಣನಿಗೆ ಮಾನ್ಯ ಮಾಡುವುದಿಲ್ಲ, ಬ್ರಾಹ್ಮಣನನ್ನು ಪೂಜಿಸುವುದಿಲ್ಲ, ಬ್ರಾಹ್ಮಣನನ್ನು ಉಪಚರಿಸುವುದಿಲ್ಲ” ಹೀಗೆ ಯುವಕ ಅಂಬಟ್ಠನು ಶಾಕ್ಯರನ್ನು ಸೇವಕರಾಗಿರಬೇಕಾದವರೆಂದು ಅವರನ್ನು ಮೊದಲನೆಯ ಸಾರಿ ಮೂದಲಿಸಿದನು.
“ಅಂಬಟ್ಠ, ಶಾಕ್ಯರು ನಿನಗೆ ಯಾವ ಅವಮಾನವನ್ನು ಮಾಡಿದರು?”
ಎರಡನೆಯಬಾರಿ ಅಗೌರವದ ಮಾತು
“ಗೋತಮ, ಒಮ್ಮೆ ಆಚಾರ್ಯರಾದ ಪೋಕ್ಖರಸತಿ ಬ್ರಾಹ್ಮಣರ ಕಾರ್ಯಕೋಸ್ಕರ ಕಪಿಲವಸ್ತುವಿಗೆ ಹೋದೆನು. ಆಮೇಲೆ ಎಲ್ಲಾ ಶಾಕ್ಯರಿಗೆ ಸೇರಿದ ಸಂಧಾಗಾರವನ್ನು (ಕಟ್ಟಡವನ್ನು) ಸಮೀಪಿಸಿದೆನು. ಆ ಸಮಯದಲ್ಲಿ ಬಹುಜನ ಶಾಕ್ಯರೂ ಶಾಕ್ಯ ಕುಮಾರರೊ ಆಸನಗಳಲ್ಲಿ ಕುಳಿತಿದ್ದರು. ಆಗ ಆವರು ಒಬ್ಬರಿಗೊಬ್ಬರು ಕಚಗುಳಿಯಿಡುತ್ತಾ ಕೇಕೆಹಾಕುತ್ತಾ ಹಾಸ್ಯ ಮಾಡುತ್ತ ಇದ್ದರು. ಅವರು ನನ್ನನ್ನೇ ಕುರಿತು ಹಾಸ್ಯ ಮಾಡುತ್ತಿದ್ದರು ಎಂದು ನನಗೆ ಖಚಿತವಾಗಿದೆ. ಆಸನದಿಂದ ಯಾರೂ ಹೇಳಲಿಲ್ಲ. ಏ ಗೋತಮ, ಅದು ಸರಿಯಾದುದಲ್ಲ ಅದು ತಕ್ಕುದಲ್ಲ. ಶಾಕ್ಯರು ಸೇವಕರಾಗಿರಬೇಕಾದವರು. ಸೇವಕ ಸಮಾನರು. ಅವರು ಬ್ರಾಹ್ಮಣನನ್ನು ಆದರಿಸುವುದಿಲ್ಲ. ಬ್ರಾಹ್ಮಣನಿಗೆ ಗೌರವ ಕೊಡುವುದಿಲ್ಲ ಬ್ರಾಹ್ಮಣನಿಗೆ ಮಾನ್ಯ ಮಾಡುವುದಿಲ್ಲ ಬ್ರಾಹ್ಮಣನನ್ನು ಪೂಜಿಸುವುದಿಲ್ಲ ಬ್ರಾಹ್ಮಣನನ್ನು ಉಪಚರಿಸುವುದಿಲ್ಲ”. ಹೀಗೆ ಯುವಕ ಅಂಬಟ್ಠನು ಶಾಕ್ಯರು ಸೇವಕರಾಗಿರಬೇಕೆಂದು ಅವರನ್ನು ಎರಡನೆಯ ಸಾರಿ ಮೂದಲಿಸಿದನು.
ಮೂರನೆಯಬಾರಿ ಅಗೌರವದ ಮಾತು
“ಅಂಬಟ್ಠ, ಒಂದು ಕೋಗಿಲೆ (ಲಾವಕ್ಕಿ) ಪಕ್ಷಿಯೋ ತನ್ನ ಗೂಡಿನಲ್ಲಿ ಬೇಕಾದ ಹಾಗೆ ಅರಚಿಕೊಳ್ಳಬಹುದು. ಅಂಬಟ್ಠ, ಹಾಗೆಯೇ ಶಾಕ್ಯರೂ ಕಪಿಲವಸ್ತುವಿನಲ್ಲಿ ಮಾಡಿರಲೂ ಸಾಧ್ಯ. ಈ ಅಲ್ಪವಾದುದುಕ್ಕೋಸ್ಕರ ಅಂಬಟ್ಠನು ಉದ್ರೇಕಗೊಳ್ಳಬಾರದು”.
“ಗೋತಮ, ವರ್ಣಗಳು ನಾಲ್ಕು - ಕ್ಷತ್ರಿಯ ಬ್ರಾಹ್ಮಣ ವೈಶ್ಯ ಮತ್ತು ಶೂದ್ರ. ಗೋತಮ, ಈ ನಾಲ್ಕು ವರ್ಣಗಳಲ್ಲಿ ಮೂರು ಕ್ಷತ್ರಿಯ ವೈಶ್ಯ ಮತ್ತು ಶೂದ್ರ-ಬ್ರಾಹ್ಮಣರ ಸೇವೆಯನ್ನು ಪರಿಚಾರಿಕೆಯನ್ನು ಮಾಡುತ್ತಾರೆ. ಗೋತಮ, ಆದುದರಿಂದ ಸೇವಕನಾಗಿರಬೇಕಾದ ಸೇವಕ ಸಮಾನರಾದ ಶಾಕ್ಯರು ಬ್ರಾಹ್ಮಣನನ್ನು ಆಚರಿಸದಿರುವುದು ಬ್ರಾಹ್ಮಣನಿಗೆ ಗೌರವ ಕೊಡದಿರುವುದು, ಬ್ರಾಹ್ಮಣನಿಗೆ ಮಾನ್ಯತೆ ಕೊಡದಿರುವುದು, ಬ್ರಾಹ್ಮಣನನ್ನು ಪೂಜಿಸದಿರುವುದು, ಬ್ರಾಹ್ಮಣನನ್ನು ಉಪಚರಿಸದಿರುವುದು ಸರಿಯಾದುದಲ್ಲ, ಅದು ತಕ್ಕದಲ್ಲ”. ಹೀಗೆ ಯುವಕ ಅಂಬಟ್ಠನು ಶಾಕ್ಯರು ಸೇವಕರಾಗಿರಬೇಕೆಂದು ಮೂರನೆಯ ಸಲ ಅವರನ್ನು ಮೂದಲಿಸಿದನು.
ದಾಸಿಪುತ್ರನ ಮಾತು
ಆಗ ಭಗವಾನರು ಹೀಗೆಂದುಕೊಂಡರು - ‘ಈ ಅಂಬಟ್ಠನು ಹಟದಿಂದ ಶಾಕ್ಯರನ್ನು ಸೇವಕರೆಂದು ನಿಂದಿಸುತ್ತಿದ್ದಾನೆ. ಅವನ ಗೋತ್ರವನ್ನೇ ಕೇಳುತ್ತೇನೆ’. ಆಮೇಲೆ ಭಗವಾನರು ಯುವಕ ಅಂಬಟ್ಠನನ್ನು ಹೀಗೆ ಕೇಳಿದರು “ನಿನ್ನ ಗೋತ್ರ ಯಾವುದು?”
“ಗೋತಮ, ನಾನು ಒಬ್ಬ ಕಣ್ಹಾಯನ.”
“ಆಂಬಟ್ಠ, ನಿನ್ನ ತಾಯಿ ತಂದೆಯರ ಗೋತ್ರಗಳ ಹೆಸರನ್ನು ಅನುಸರಿಸಿದರೆ ಶಾಕ್ಯರು ಆರ್ಯ ಪುತ್ರರಾಗಿದ್ದಾರೆ. ನೀನು ಶಾಕ್ಯರು ದಾಸಿಪುತ್ರನಾಗಿದ್ದೀಯೆ. ಅಂಬಟ್ಠ, ಓಕ್ಖಾಕ (ಇಕ್ಷ್ವಾಕು) ರಾಜನು ಶಾಕ್ಯರಿಗೆ ಮೂಲ ಪುರಷನಾಗಿದ್ದಾನೆ.
“ಬಹು ಹಿಂದೆ, ಅಂಬಟ್ಠ, ರಾಜ ಓಕ್ಖಾಕನು ತನಗೆ ಪ್ರ್ರಿಯಳಾದ ರಾಣಿಯ ಮಗನಿಗೆ ರಾಜ್ಯವನ್ನು ಕೊಡುವುದಕ್ಕೋಸ್ಕರ ಹಿರಿಯ ರಾಣಿಯ ಮಕ್ಕಳಾದ ಓಕ್ಖಾಮುಖ. ಕರಕಂಡ, ಹತ್ಥಿನಿಕ ಸಿನಿಸೂರರನ್ನು ರಾಷ್ಟ್ರದಿಂದ ಓಡಿಸಿಬಿಟ್ಟನು. ರಾಷ್ಟ್ರದಿಂದ ಓಡಿಸಲ್ಪಟ್ಟ, ಅವರು ಹಿಮವಂತ ಪರ್ವತದಲ್ಲಿನ ಒಂದು ಸರೋವರದ ತೀರದಲ್ಲಿನ ಒಂದು ಬಹು ದೊಡ್ಡ ಶಾಕ್ಯವೃಕ್ಷದ ಕೆಳಗೆ ಒಟ್ಟಿಗೆ ವಾಸಿಸುತ್ತಿದ್ದರು. ಜಾತಿ ಸಂಕರವಾಗುವುದೆಂಬ ಭಯದಿಂದ ಶಾಕ್ಯ ಕುಲಕ್ಕೆ ಸೇರಿದ ಭಗಿನಿಯರನ್ನೇ ಮದುವೆಯಾಗುತ್ತಿದ್ದರು ಆಗ, ಅಂಬಟ್ಠ, ರಾಜ ಓಕ್ಖಾಕನು ಅಮಾತ್ಯರನ್ನು ಕುರಿತು ಹೀಗೆಂದನು. “ಈಗ ಕುಮಾರರು ಎಲ್ಲಿ ವಾಸಿಸುತ್ತಿದ್ದಾರೆ?” “ದೇವ ಹಿಮವಂತ ಪರ್ವತದಲ್ಲಿನ ಸರೋವರದ ತೀರದಲ್ಲಿನ ಮಾಹ ಶಾಕ್ಯವೃಕ್ಷದ ಹತ್ತಿರ ಕುಮಾರರು ವಾಸಿಸುತ್ತಿದ್ದಾರೆ. ಜಾತಿ ಸಂಕವಾಗುವುದೆಂಬ ಭಯದಿಂದ ಶಾಕ್ಯರೆ ಭಗನಿಯರೊಂದಿಗೇ ಮದುವೆಯಾಗಿದ್ದಾರೆ.”
“ಅಂಬಟ್ಠ, ಆಗ ರಾಜ ಓಕ್ಖಾಕನು ಹೀಗೆ ಉದ್ಗಾರವನ್ನು ಮಾಡಿದನು. “ಕುಮಾರರು ಶಾಕ್ಯರಾಗಿಯೇ ಇದ್ದಾರೆ. ಕುಮಾರರು ಪರಮ ಶಾಕ್ಯರಾಗಿಯೇ ಉಳಿಯುತ್ತಾರೆ.’ ಅಂಬಟ್ಠ ಶಾಕ್ಯರೆಂದು ಅವರಿಗೆ ಹೆಸರು ಬರಲು ಇದೇ ಕಾರಣ.”
ಅಂಬಟ್ಠ, ರಾಜ ಓಕ್ಖಾಕನಿಗೆ ದಿಸಾ ಎಂಬ ಹೆಸರಿನ ದಾಸಿಯೊಬ್ಬಳಿದ್ದಳು. ಅವಳಿಗೆ ಕಣ್ಹ ಎಂಬ ಹೆಸರಿನ ಮಗು ಹುಟ್ಟಿತು. ಕಣ್ಹನು ಹುಟ್ಟಿದ ಕೂಡಲೇ ಹೀಗೆ ಹೇಳಿದ ‘ ನನ್ನನ್ನು ತೊಳೆ ಅಮ್ಮ, ನನಗೆ ಸ್ನಾನಮಾಡಿಸು ಅಮ್ಮ, ಈ ಅಶುಚಿಯಿಂದ ನನ್ನನ್ನು ಬಿಡಿಸು, ಮುಂದೆ ಪ್ರಯೋಜನಕಾರಿಯಾಗುತ್ತೇನೆ.’ ಅಂಬಟ್ಠ, ಈಗ ಮನುಷ್ಯರು ಪಿಶಾಚಿಗಳನ್ನು ನೋಡಿ ಪಿಶಾಚಿಗಳೆಂದು ತಿಳಿಯುತ್ತಾರೆ. ಹಾಗೆಯೇ ಆ ಕಾಲದಲ್ಲಿ ಮನಷ್ಯರು ಪಿಶಾಚಿಗಳನ್ನು ‘ ಕಣ್ಹ’ ಎಂದರೆ ‘ ಕಪ್ಪಾದವರು’ ಎಂದು ಕರೆಯುತ್ತಿದ್ದರು. ಅವರು ಹೀಗೆ ಆಡಿಕೊಂಡರು “ ಹುಟ್ಟಿದ ಕೂಡಲೇ ಇವನು ಮಾತನಾಡಿದ. ಇವನ್ನು ಹುಟ್ಟುವಾಗಲೇ ಕಪ್ಪು, ಪಿಶಾಚಿಯೇ ಹುಟ್ಟಿದ.’ ಅಂಬಟ್ಠ, ಅಂದಿನಿಂದ, ಕಣ್ಹಾಯನ ಎಂಬ ಹೆಸರು ಬಂದಿತು. ಅವನೇ ಕಣ್ಹಾಯನರ ಪೂರ್ವ ಪುರಷ. ಹೀಗೆ ಅಂಬಟ್ಠ, ನಿನ್ನ ತಾಯಿ ತಂದೆಯರ ಗೋತ್ರಗಳ ಹೆಸರನ್ನು ಅನುಸರಿಸಿದರೆ ಶಾಕ್ಯರು ಆರ್ಯಪುತ್ರರಾಗಿದ್ದರೆ ನೀನು ದಾಸಿಪುತ್ರನಾಗಿದ್ದೀಯೆ.
ಹೀಗೆ ಹೇಳಿದ ಭಗವಾನರಿಗೆ ಯುವಕರು ಹೇಳಿದರು- “ಗೋತಮನು ಅಂಬಟ್ಠನನ್ನು ಹಟವಾದಿ ಎಂದೂ ದಾಸಿಪುತ್ರನೆಂದು ಮೂದಲಿಸುವುದು ಬೇಡ. ಗೋತಮ, ಯುವಕ ಅಂಬಟ್ಠನು ಒಳ್ಳೆಯ ವಂಶದಲ್ಲಿ ಹುಟ್ಟಿದವನು, ಯುವಕ ಅಂಬಟ್ಠನು ಕುಲಪುತ್ರನು. ಯುವಕ ಅಂಬಟ್ಠನು ಬಹುಶೃತನು, ಯುವಕ ಅಂಬಟ್ಠನು ಕಲ್ಯಾಣವಾದುದನ್ನೇ ಹೇಳುವವನು, ಯುವಕ ಅಂಬಟ್ಠನು ಪಂಡಿತನು ಗೋತಮನೊಂದಿಗೆ ಮಾತನಾಡಿ ಸರಿಯಾದ ಉತ್ತರವನ್ನು ಕೊಡಬಲ್ಲವನಾಗಿದ್ದಾನೆ.
ಆಗ ಭಗವಾನರು ಯುವಕರಿಗೆ ಹೀಗೆ ಹೇಳಿದರು- “ ಯುವಕ ಅಂಬಟ್ಠನು ಕೆಟ್ಟ ಕುಲದಲ್ಲಿ ಹುಟ್ಟಿದವನ್ನು, ಯುವಕ ಅಂಬಟ್ಠನು ಅಕುಲಪುತ್ರನು, ಯುವಕ ಅಂಬಟ್ಠನು ಹೆಚ್ಚು ತಿಳಿದವನಲ್ಲ, ಯುವಕ ಅಂಬಟ್ಠನು ಅಕಲ್ಯಾಣವಾದುದನ್ನು ಹೇಳುವವನು, ಯುವಕ ಅಂಬಟ್ಠನು ಕೆಟ್ಟ ಭಾವನೆಯುಳ್ಳವನು. ಧರ್ಮ ಗೋತಮನೊಂದಿಗೆ ಯುವಕ ಅಂಬಟ್ಠನು ಮಾತನಾಡಿ ಸರಿಯಾದ ಉತ್ತರ ಕೊಡಲಾರ- ಎಂದು ನೀವು ನಿಮ್ಮ ಅಂಬಟ್ಠನನ್ನು ಕುರಿತು ಹೇಳುವುದಾದರೆ ಯುವಕ ಅಂಬಟ್ಠನು ಸುಮ್ಮನೆ ನಿಂತುಕೊಳ್ಳಲಿ. ನೀವೇ ನನ್ನೊಂದಿಗೆ ಚರ್ಚಿಸಿ ಉತ್ತರ ಕೊಡಿ. ನೀವು ಹೇಳುವಂತೆ- ‘ಯುವಕ ಅಂಬಟ್ಠನು ಒಳ್ಳೆಯ ವಂಶದಲ್ಲಿ ಹುಟ್ಟಿದವನು. ಯುವಕ ಅಂಬಟ್ಠನು ಕುಲಪುತ್ರನು. ಯುವಕ ಅಂಬಟ್ಠನು ಬಹುಶ್ರುತನು, ಯುವಕ ಅಂಬಟ್ಠನು ಕಲ್ಯಾಣವಾದುದನ್ನೇ ಹೇಳುವವನು, ಯುವಕ ಅಂಬಟ್ಠನು ಪಂಡಿತನು, ಗೋತಮನೊಂದಿಗೆ ಮಾತನಾಡಿ ಸರಿಯಾದ ಉತ್ತರವನ್ನು ಕೊಡಬಲ್ಲವನು. ಆಗಿದ್ದರೆ ನೀವು ಸುಮ್ಮನೆ ನಿಂತುಕೊಳ್ಳಿ. ಯುವಕ ಅಂಬಟ್ಠನೇ ನನ್ನೊಂದಿಗೆ ಮಾತನಾಡಿ ಉತ್ತರ ಕೊಡುತ್ತಾನೆ.
“ಗೋತಮ, ಯುವಕ ಅಂಬಟ್ಠನು ಒಳ್ಳೆಯ ವಂಶದಲ್ಲಿ ಹುಟ್ಟಿದವನು, ಯುವಕ ಅಂಬಟ್ಠನು ಕುಲಪುತ್ರನು, ಯುವಕ ಅಂಬಟ್ಠನು ಬಹು ಶ್ರುತನು, ಯುವಕ ಅಂಬಟ್ಠನು ಕಲ್ಯಾಣವಾದುದನ್ನೇ ಹೇಳುವವನು, ಯುವಕ ಅಂಬಟ್ಠನು ಪಂಡಿತನು ಯುವಕ ಅಂಬಟ್ಠನು ಗೋತಮನೊಂದಿಗೆ ಮಾತನಾಡಿ ಸರಿಯಾದ ಉತ್ತರವನ್ನು ಕೊಡಬಲ್ಲವನ್ನು. ನಾವು ಸುಮ್ಮನಿರುತ್ತೇವೆ. ಯುವಕ ಅಂಬಟ್ಠನೇ ಗೋತಮನೊಂದಿಗೆ ಮಾತನಾಡಿ ಸರಿಯಾದ ಉತ್ತರ ಕೊಡುತ್ತಾನೆ.
ಆಮೇಲೆ ಭಗವಾನರು ಯುವಕ ಅಂಬಟ್ಠನಿಗೆ ಹೀಗೆ ಹೇಳಿದರು- “ಅಂಬಟ್ಠ, ಹಾಗಾದರೆ ಒಂದು ಸಹಜ ಪ್ರಶ್ನೆ ಬರುತ್ತದೆ. ನಿನಗೆ ಇಷ್ಟವಿರಲಿ ಇಲ್ಲದಿರಲಿ ಉತ್ತರ ಕೊಡಲೇ ಬೇಕು. ನೀನು ಉತ್ತರ ಕೊಡದೆ ಹೋದರೆ, ಬೇರೆ ಕಡೆಗೆ ಮಾತು ತಿರುಗಿಸಿದರೆ, ಅಥವಾ ಮೌನವಾಗಿ ಉಳಿದುಕೊಂಡರೆ, ಅಥವಾ ಉತ್ತರ ಹೇಳದೆ ಹೋದರೆ ನಿನ್ನ ತಲೆ ಇಲ್ಲಿಯೇ ಹೋಳಾಗಿ ಹೋಗುತ್ತದೆ. ಅಂಬಟ್ಠ, ಕಣ್ಹಾಯನರ ಮತ್ತು ಅವರ ಪೂರ್ವ ಪುರಷನ ಮೂಲದ ಬಗೆಗೆ ಬ್ರಾಹ್ಮಣರು ವೃದ್ಧರು ಹಿರಿಯರು ಆಚ್ಯಾರರು ಅವರ ಆಚಾರ್ಯರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿ ಏನು ತಿಳಿದುಕೊಂಡಿರುವೆಯಾ?”
ಈ ಮಾತುಗಳನ್ನು ಕೇಳಿದ ಅಂಬಟ್ಠನು ಮೌನವಾದನು. ಭಗವಾನರು ಎರಡನೆಯ ಸಾರಿ ಯುವಕ ಅಂಬಟ್ಠನಿಗೆ ಹೀಗೆ ಹೇಳಿದರು- “ಕಣ್ಹಾಯನರ ಮತ್ತು ಅವರ ಪೂರ್ವ ಪುರಷನ ಮೂಲದ ಬಗೆಗೆ ಬ್ರಾಹ್ಮಣರು ವೃದ್ಧರು ಹಿರಿಯರು ಆಚ್ಯಾರರು ಅವರ ಆಚಾರ್ಯರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿರುವೆಯಲ್ಲವೇ? ಆದರಿಂದ ಏನು ತಿಳಿದುಕೊಂಡೆ?” ಯುವಕ ಅಂಬಟ್ಠನು ಎರಡನೆಯ ಸಾರಿ ಮೌನವಾದನು. ಆಗ ಭಗವಾನರು ಯುವಕ ಅಂಬಟ್ಠನಿಗೆ ಹೀಗೆ ಹೇಳಿದರು- “ಅಂಬಟ್ಠ ನೀನು ಹೇಳಲೇ ಬೇಕು. ಮೌನದಿಂದಿರುವ ಕಾಲ ಆಗಿಹೋಯಿತು. ಅಂಬಟ್ಠ, ತಥಾಗತನಿಂದ ಸಹಜವಾಗಿ ಬಂದ ಪ್ರಶ್ನೆಗೆ ಮೂರನೆಯ ಸಾರಿಯೂ ಉತ್ತರ ಹೇಳದವನ ತಲೆಯು ಇರುವಲ್ಲಿಯೇ ಹೋಳಾಗಿ ಹೋಗುತ್ತದೆ.”
ಆಗ ವಜ್ರಪಾಣಿಯಕ್ಷನು ಅಗ್ನಿಯಿಂದ ಪ್ರಜ್ವಲಿಸುತ್ತಿರುವ ಬಹು ದೊಡ್ಡ ಕಬ್ಬಿಣದ ಗದೆಯನ್ನು ಹಿಡಿದು ಯುವಕ ಅಂಬಟ್ಠನ ಮೇಲುಗಡೆಯೇ ಆಕಾಶದಲ್ಲಿ ಕಾಣಿಸಿಕೊಂಡನು. ಭಗವಾನರಿಂದ ಸಹಜವಾಗಿ ಬಂದ ಪ್ರಶ್ನೆಗೆ ಯುವಕ ಅಂಬಟ್ಠನು ಮೂರನೆಯ ಸಾರಿಯೂ ಉತ್ತರ ಕೊಡಲಿಲ್ಲ. ಆದುದರಿಂದ ಅವನ ತಲೆ ಒಡೆದುಹೋಗುತ್ತದೆ ಎಂದು ಹೇಳಿದನು. ಹೀಗೆ ಹೇಳಿದ ವಜ್ರಪಾಣಿ ಯಕ್ಷನನ್ನು ನೋಡಿದನು. ಯುವಕ ಅಂಬಟ್ಠನೂ ನೋಡಿದನು.
ಆಗ ಯುವಕ ಅಂಬಟ್ಠನು ನಡುಗಿ ಹೋದನು. ಭಯದಿಂದ ಅವನ ಕೂದಲುಗಳೆಲ್ಲಾ ನಿಮಿರಿಹೋದವು (ಲೋಮಹಟ್ಟಿಜಾತೇ) ಭಗವಾನರಿರುವ ಸ್ಥಳಕ್ಕೆ ಬಂದು ಭಗವಾನರಿಗೆ ಅಡ್ಡಬಿದ್ದು ಅವರಿಗೆ ಶರಣು ಹೋದನು. ಭಗವಾನರ ತೀರಾ ಹತ್ತಿರಕ್ಕೆ ಹೋಗಿ ಹೀಗೆ ಕೇಳಿಕೊಂಡನು “ಗೋತಮನು ಹೇಳಿದುದ್ದೇನು, ಮತ್ತೊಮ್ಮೆ ಗೋತಮನು ಹೇಳಲಿ.”
“ಅಂಬಟ್ಠ, ಕಣ್ಹಾಯನರ ಮತ್ತು ಅವರ ಪೂರ್ವ ಪುರಷನ ಮೂಲದ ಬಗೆಗೆ ಬ್ರಾಹ್ಮಣರು ವೃದ್ಧರು ಹಿರಿಯರು ಆಚ್ಯಾರರು ಅವರ ಆಚಾರ್ಯರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿ ಏನು ತಿಳಿದುಕೊಂಡಿರುವೇ?”
“ಗೋತಮ, ನೀನು ಹೇಳಿದುದನ್ನೇ ನಾನೂ ಕೇಳಿದ್ದೇನೆ. ಕಣ್ಹಾಯನರು ಮತ್ತು ಅವರ ಪೂರ್ವಪುರಷನ ಮೂಲವು ಹೇಳಿದಂತೆಯೇ ಇದೆ.”
ಅಂಬಟ್ಠನ ವಂಶದ ಬಗ್ಗೆ
ಇದನ್ನು ಕೇಳಿದ ಆ ಯುವಕರು ಕಳವಳಗೊಂಡರು. ಕ್ಷುಬ್ಧ ಗೊಂಡರು”ಯುವಕ ಅಂಬಟ್ಠನು ನೀಚ ವಂಶದಲ್ಲಿ ಹುಟ್ಟಿರುವನೆಂದೆನ್ನಿಸಿಕೊಂಡಿದ್ದಾನೆ, ಯುವಕ ಅಂಬಟ್ಠನು ಅಕುಲಪುತ್ತನೆನ್ನಿಸಿಕೊಂಡಿದ್ದಾನೆ. ಯುವಕ ಅಂಬಟ್ಠನು ಶಾಕ್ಯರ ದಾಸೀಪುತ್ರನೆನ್ನಿಸಿಕೊಂಡಿದ್ದಾನೆ. ಯುವಕ ಅಂಬಟ್ಠನಿಗೆ ಶಾಕ್ಯರು ಮೂಲಪುರುಷರಾಗಿದ್ದಾರೆ. ಸಮಣ ಗೋತಮನು ನಿಜವನ್ನು ಹೇಳುವವನಾಗಿರುವುದರಿಂದ ನಾವು ಅವನು ಹೇಳಿದುದನ್ನು ನಂಬುತ್ತೇವೆ.”
ಆಗ ಭಾಗವಾನರು ಹೀಗೆಂದುಕೊಂಡರು ‘ಈ ಯುವಕರು ಯುವಕ ಅಂಬಟ್ಠನನ್ನು ದಾಸೀಪುತ್ರನೆಂದು ಕರೆದು ಅತಿಯಾಗಿ ಅವಮಾನಗೊಳಿಸುತ್ತಿದ್ದಾರೆ. ನಾನು ಅವನನ್ನು ಈ ನಿಂದೆಯಿಂದ ಬಿಡಿಸಬೇಕು.’ ಆಮೇಲೆ ಭಗವಾನರು ಆ ಯುವಕರಿಗೆ ಹೀಗೆಂದರು- “ಯುವಕರೇ, ಅಂಬಟ್ಠನನ್ನು ದಾಸೀಪುತ್ರನೆಂದು ಕರೆದು ಅತಿಯಾಗಿ ಅವಮಾನಗೊಳಿಸಬೇಡಿ. ಆ ಕಣ್ಹನು ದೊಡ್ಡ ಋಷಿಯಾದನು. ಆತನು ದಕ್ಷಿಣ ಜನಪದಕ್ಕೆ ಹೋಗಿ ಬ್ರಹ್ಮಮಂತ್ರವನ್ನು ಚೆನ್ನಾಗಿ ಅರಿತುಕೊಂಡು ಓಕ್ಖಾಕ ರಾಜನನ್ನು ಸಮೀಪಿಸಿ ಅವನ ಮಗಳು ಮದ್ದರೂಪಿಯನ್ನು ಮದುವೆ ಮಾಡಿಕೊಡಬೇಕೆಂದು ಕೇಳಿದನು. ರಾಜ ಓಕ್ಖಾಕನು ‘ ನನ್ನ ದಾಸಿಪುತ್ರನಿಗೆ ಸಮಾನನಾದ ಇವನು ನನ್ನ ಮಗಳು ಮದ್ದರೂಪಿಯನ್ನು ಕೇಳುವವನಾದನೇ’ ಎಂದು ಅಸಮಾಧಾನದಿಂದ ಕುಪಿತನಾಗಿ ಬಾಣವನ್ನು ಬಿಲ್ಲಿಗೆ ಜೋಡಿಸಿಕೊಂಡನು. ಆದರೆ ಆ ಬಾಣವನ್ನು ಬಿಡುವುದಕ್ಕೆ ಆಗಲಿಲ್ಲ, ಹಿಂದಕ್ಕೆ ತೆಗೆದುಕೊಳ್ಳುವುದಕ್ಕೂ ಆಗಲಿಲ್ಲ.
“ಯುವಕರೇ, ಆಗ ಅಮಾತ್ಯರು ಇತರ ಆಸ್ಥಾನಿಕರೂ ಕಣ್ಹ ಋಷಿಯ ಹತ್ತಿರಕ್ಕೆ ಹೋಗಿ ಕೇಳಿಕೊಂಡರು. ‘ಪೂಜ್ಯರೆ, ರಾಜನಿಗೆ ಒಳ್ಳ್ಳೆಯದಾಗಲಿ, ಪೂಜ್ಯರೇ ರಾಜನಿಗೆ ಸ್ವಸ್ತಿಯಾಗಲಿ.’
‘ರಾಜನಿಗೆ ಒಳ್ಳ್ಳೆಯದಾಗುತ್ತದೆ. ಜನಪದಕ್ಕೂ ಒಳ್ಳೆಯದಾಗುತ್ತದೆ. ರಾಜನು ಬಾಣವನ್ನು ಮೇಲಕ್ಕೆ ಬಿಟ್ಟರೆ ರಾಜನು ಎಲ್ಲಿಯವರೆಗೆ ರಾಜ್ಯವನ್ನು ಗೆದ್ದಿದ್ದಾನೋ ಅಷ್ಟು ಪ್ರದೇಶಕ್ಕೆ ಏಳು ವರ್ಷಗಳವರೆಗೆ ದೇವತೆಗಳು ಮಳೆಯನ್ನು ಕೊಡುವುದಿಲ್ಲ.’
‘ಪೂಜ್ಯರೇ, ರಾಜನಿಗೆ ಒಳ್ಳೆಯದಾಗಲಿ, ಜನಪದಕ್ಕೂ ಒಳ್ಳ್ಳೆಯದಾಗಲಿ, ದೇವತೆಯು ಮಳೆಯನ್ನು ಕೊಡಲಿ.’
‘ರಾಜನಿಗೆ ಒಳ್ಳೆಯದಾಗುತ್ತದೆ, ರಾಜನು ಬಾಣವನ್ನು ಕೆಳಗೆ ಬಿಟ್ಟರೆ ರಾಜನು ಎಲ್ಲಿಯವರೆಗೆ ಈ ಪೃಥ್ವಿಯನ್ನು ಗೆದ್ದಿದ್ದಾನೋ ಅಷ್ಟು ದೇಶವೂ ಒಣಗಿಹೋಗುತ್ತದೆ. ರಾಜನಿಗೆ ಸ್ವಸ್ತಿಯಾಗಲಿ, ಪೂಜ್ಯರೇ ಜನಪದಕ್ಕೂ ಸ್ವಸ್ತಿಯಾಗಲಿ, ರಾಜನಿಗೂ ಒಳ್ಳೆಯದಾಗುತ್ತದೆ, ಜನಪದಕ್ಕೂ ಒಳ್ಳೆಯದಾಗುತ್ತದೆ, ದೇವತೆಯು ಮಳೆಯನ್ನು ಸುರಿಸುತ್ತದೆ. ರಾಜನು ಜೇಷ್ಠ ಕುಮಾರನ ಕಡೆಗೆ ಬಾಣವನ್ನು ಬಿಡಲಿ. ಕುಮಾರನ ಕೂದಲಿಗೂ ಬಾಧೆಯಾಗುವುದಿಲ್ಲ.’
“ಆಗ ಯುವಕರೇ, ಅಮಾತ್ಯರು ಓಕ್ಕಾಕನಿಗೆ ಹೀಗೇ ಹೇಳಿದರು: ‘ಓಕ್ಕಾಕನು ಜೇಷ್ಠ ಕುಮಾರನ ಕಡೆಗೆ ಬಾಣವನ್ನು ಬಿಡಲಿ, ಕುಮಾರನಿಗೆ ಒಳ್ಳೆಯದಾಗುತ್ತದೆ. ಅವನ ಕೂದಲಿಗೂ ನೋವಾಗುವುದಿಲ್ಲ.’ ಅದರಂತೆ ಓಕ್ಕಾಕ ರಾಜನು ಜೇಷ್ಠ ಕುಮಾರನ ಕಡೆಗೆ ಬಾಣವನ್ನು ಬಿಟ್ಟನು. ಕುಮಾರನಿಗೆ ಕೂದಲಿನಷ್ಟೂ ನೋವಾಗಲಿಲ್ಲ. ಆಗ ರಾಜನು ಭೀತನಾಗಿ ತನ್ನ ಮಗಳು ಮದ್ದರೂಪಿಯನ್ನು ಕಣ್ಹನಿಗೆ ಬ್ರಹ್ಮದಂಡದೊಂದಿಗೆ ಕೊಟ್ಟನು. ಯುವಕರೇ, ಯುವಕ ಅಂಬಟ್ಠನನ್ನು ದಾಸೀಪುತ್ರನೆಂದು ಅತಿಯಾಗಿ ಅವಹೇಳನ ಮಾಡಬೇಡಿ. ಕಣ್ಹನು ಶ್ರೇಷ್ಠನಾದ ಋಷಿ.’
ಕ್ಷತ್ರಿಯರು ಶ್ರೇಷ್ಠವೆಂಬ ಭಾವನೆ
ಭಗವಾನರು ಯುವಕ ಅಂಬಟ್ಠನನ್ನು ಕುರಿತು ಹೀಗೆಂದರು- “ಅಂಬಟ್ಠ, ಕ್ಷತ್ರಿಯ ಕುಮಾರನೊಬ್ಬ ಬ್ರಾಹ್ಮಣ ಕನ್ಯೆಯೊಂದಿಗೆ ಸಹ ಜೀವನ ಮಾಡುತ್ತಾನೆನ್ನು. ಆ ಸಹವಾಸದಿಂದ ಒಂದು ಗಂಡು ಮಗು ಹುಟ್ಟುತ್ತದೆನ್ನು. ಕ್ಷತ್ರಿಯ ಕುಮಾರನಿಗೆ ಬ್ರಾಹ್ಮಣ ಕನ್ಯೆಯಿಂದ ಹುಟ್ಟಿದ ಮಗನು ಬ್ರಾಹ್ಮಣರಿಂದ ಆಸನವನ್ನೂ ನೀರನ್ನೂ ಪಡೆಯುತ್ತಾನೆಯೇ? ನಿನಗೆ ಏನನ್ನಿಸುತ್ತದೆ, ಹೇಳು.”
“ಗೋತಮ, ಆತ ಪಡೆಯುತ್ತಾನೆ.”
“ಬ್ರಾಹ್ಮಣರು ಶ್ರಾದ್ಧದದಿನ ಅವನಿಗೆ ಊಟವನ್ನು ಹಾಕುತ್ತಾರೆಯೇ, ಯಜ್ಞದ ಪ್ರಸಾದವನ್ನು ಕೊಡುತ್ತಾರೆಯೇ? ಅಥವಾ ಊಟವನ್ನು ಪ್ರಸಾದವಾಗಿ ಕಳುಹಿಸುತ್ತಾರೆಯೋ?” “ಹಾಗೆಯೇ ಮಾಡುತ್ತಾರೆ, ಗೋತಮ.”
“ಅವನಿಗೆ ಬ್ರಾಹ್ಮಣರು ಮಂತ್ರಗಳನ್ನು ಹೇಳಿಕೊಡುತ್ತಾರೆಯೋ ಅಥವ ಇಲ್ಲವೋ?” “ಹೇಳಿಕೊಡುತ್ತಾರೆ, ಗೋತಮ.”
“ತಮ್ಮ ಸ್ತ್ರೀಯರಿಂದ ಅವನನ್ನು ದೂರವಿಡುತ್ತಾರೆಯೋ, ಇಲ್ಲವೋ?” “ದೂರವಿಡುವುದಿಲ್ಲ, ಗೋತಮ”
“ಆದರೆ, ಕ್ಷತ್ರಿಯರು ಅವನಿಗೆ ಕ್ಷತ್ರಿಯಾಭಿಷೆಕವನ್ನು ಮಾಡುತ್ತಾರೆಯೋ? “ಇಲ್ಲ, ಗೋತಮ”,
“ಕಾರಣವೇನು?” “ತಾಯಿಯ ಕಡೆಯಿಂದ ಅವನು ಶುದ್ಧ ವಂಶದಲ್ಲಿ ಹುಟ್ಟಿಲ್ಲ ಗೋತಮ”.
“ಅಂಬಟ್ಠ, ಬ್ರಾಹ್ಮಣ ಕುಮಾರನೊಬ್ಬನು ಕ್ಷತ್ರಿಯ ಕನ್ಯೆಯೊಂದಿಗೆ ಸಹ ಜೀವನ ಮಾಡುತ್ತಾನೆನ್ನು. ಆ ಸಹವಾಸದಿಂದ ಒಂದು ಗಂಡು ಮಗು ಹುಟ್ಟುತ್ತದೆನ್ನು. ಬ್ರ್ರಾಹ್ಮಣಕುಮಾರನಿಗೆ ಕ್ಷತ್ರಿಯ ಕನ್ಯೆಯಲ್ಲಿ ಹುಟ್ಟಿದ ಮಗನು ಬ್ರಾಹ್ಮಣರಿಂದ ಆಸನವನ್ನೂ ನೀರನ್ನೂ ಪಡೆಯುತ್ತಾನೆಯೋ?”
“ಪಡೆಯುತ್ತಾನೆ, ಗೋತಮ” “ಬ್ರಾಹ್ಮಣರು ಶ್ರಾದ್ಧದ ದಿನ ಅವನಿಗೆ ಊಟ ಹಾಕುತ್ತಾರೆಯೋ, ಯಜ್ಞದ ಪ್ರಸಾದವನ್ನು ಕೊಡುತ್ತಾರೆಯೋ ಅಥವಾ ಊಟವನ್ನು ಪ್ರಸಾದವಾಗಿ ಕಳಿಸುತ್ತಾರೆಯೋ?” “ಹಾಗೆಯೇ ಮಾಡುತ್ತಾರೆ” “ಬ್ರಾಹ್ಮಣರು ಅವನಿಗೆ ಮಂತ್ರಗಳನ್ನು ಹೇಳಿಕೊಡುತ್ತಾರೆಯೋ?” “ಹೇಳಿಕೊಡುತ್ತಾರೆ, ಗೋತಮ” “ತಮ್ಮ ಸ್ತ್ರೀಯರಿಂದ ಅವನನ್ನು ದೂರವಿಡುತ್ತಾರೆಯೋ, ಇಲ್ಲವೋ?” “ದೂರವಿಡುವುದಿಲ್ಲ” “ಆದರೆ, ಕ್ಷತ್ರಿಯರು ಕ್ಷತ್ರಿಯಾಭಿಷೇಕವನ್ನು ಮಾಡುತ್ತಾರೆಯೋ, ಇಲ್ಲವೋ?” “ಮಾಡುವುದಿಲ್ಲ, ಗೋತಮ” “ಕಾರಣವೆನು?” “ತಂದೆಯ ಕಡೆಯಿಂದ ಅವನು ಶುದ್ಧವಂಶದಲ್ಲಿ ಹುಟ್ಟಿಲ್ಲ”.
“ಅಂಬಟ್ಠ, ಸ್ತ್ರೀಯರನ್ನು ಸ್ತ್ರೀಯರೊಂದಿಗೆ ಹೋಲಿಸಿದಾಗಾಗಲೀ, ಅಥವಾ ಪುರಷರನ್ನು ಪುರಷರೊಂದಿಗೆ ಹೋಲಿಸಿದಾಗಾಗಲೀ, ಕ್ಷ್ಷತ್ರಿಯರೇ ಶ್ರೇಷ್ಠರು, ಬ್ರಾಹಣರು ಹೀನರು. “ಅಂಬಟ್ಠ, ಬ್ರಾಹ್ಮಣರು ಬ್ರಾಹ್ಮಣನೊಬ್ಬನನ್ನು ಯಾವುದಾದರೂ ತಪ್ಪು ಪ್ರಕರಣಕ್ಕಾಗಿ ತಲೆಯನ್ನು ಬೋಳಿಸಿ ತಲೆಗೆ ಬೂದಿಯನ್ನು ಸುರಿದು ರಾಷ್ಟ್ರದಿಂದಲೋ ನಗರದಿಂದಲೋ ಹೊರಗಟ್ಟು ತ್ತಾರೆನ್ನು. ಬ್ರಾಹ್ಮಣರ ಮಧ್ಯೆ ಅವನಿಗೆ ಅಸನವನ್ನು ಕೊಡುತ್ತಾರೆಯೇ? ಬ್ರಾಹ್ಮಣರಿಗೆ ಕೊಡುವಂತೆ ನೀರನ್ನು ಕೊಡುತ್ತಾರೆಯೇ?”
“ಕೊಡುವುದಿಲ್ಲ, ಗೋತಮ”
“ಮತ್ತೆ ಬ್ರಾಹ್ಮಣರು ಶ್ರಾದ್ಧದ ದಿನ ಅವನಿಗೆ ಊಟ ಹಾಕುತ್ತಾರೆಯೇ,ಯಜ್ಞದ ಪ್ರಸಾದವನ್ನು ಕೊಡುತ್ತಾರೆಯೇ ಅಥವಾ ಊಟವನ್ನು ಪ್ರಸಾದವಾಗಿ ಕಳಿಸುತ್ತಾರೆಯೇ?”
“ಇಲ್ಲ, ಗೋತಮ”
“ಮತ್ತೆ, ಅವನಿಗೆ ಬ್ರಾಹ್ಮಣರು ಮಂತ್ರಗಳನ್ನು ಹೇಳಿಕೊಡುತ್ತಾರೆಯೇ.”
“ಮತ್ತೆ, ತಮ್ಮ ಸ್ತ್ರೀಯರಿಂದ ದೂರವಿಡುತ್ತಾರೆಯೋ, ಇಲ್ಲವೊ?”
ದೂರವಿಡುತ್ತಾರೆ, ಗೋತಮ”
“ಅಂಬಟ್ಠ, ಕ್ಷತ್ರಿಯರು ಕ್ಷತ್ರಿಯನೊಬ್ಬನಿಗೆ (ಯಾವುದಾದರೂ ತಪ್ಪು ಪ್ರಕರಣಕ್ಕಾಗಿ) ತಲೆ ಬೋಳಿಸಿ, ಅವನ ತಲೆಯ ಮೇಲೆ ಬೂದಿಯನ್ನು ಸುರಿದು ರಾಷ್ಟ್ರದಿಂದಲೋ ನಗರದಿಂದಲೋ ಹೊರಗಟ್ಟುತ್ತಾರೆನ್ನು, ಅವನಿಗೆ ಬ್ರಾಹ್ಮಣರ ಮಧ್ಯೆ ಆಸನ ದೊರಕುತ್ತದೆಯೇ? ಬ್ರಾಹ್ಮಣರಿಗೆ ಕೊಡುವಂತೆ ನೀರನ್ನು ಕೊಡುತ್ತಾರೆಯೇ?”
“ಕೊಡುತ್ತಾರೆ, ಗೋತಮ”
“ಮತ್ತೆ ಬ್ರಾಹ್ಮಣರು ಶಾದ್ಧದ ದಿನ ಅವನಿಗೆ ಊಟ ಹಾಕುತ್ತಾರೆಯೇ? ಯಜ್ಞದ ಪ್ರಸಾದವನ್ನು ಕೊಡುತ್ತಾರೆಯೇ, ಅಥವಾ ಊಟವನ್ನು ಪ್ರಸಾದವಾಗಿ ಕಳಿಸುತ್ತಾರೆಯೇ?
“ಹಾಗೆಯೇ ಮಾಡುತ್ತಾರೆ, ಗೋತಮ”
“ಬ್ರಾಹ್ಮಣರು ಮಂತ್ರಗಳನ್ನು ಹೇಳಿಕೊಡುತ್ತಾರೆಯೇ?
“ಹೇಳಿಕೊಡುತ್ತಾರೆ, ಗೋತಮ,
“ಮತ್ತೆ, ತಮ್ಮ ಸ್ತ್ರೀಯರಿಂದ ದೂರವಿಡುತ್ತಾರೋ, ಇಲ್ಲವೋ?’
“ದೂರವಿಡುವುದಿಲ್ಲ, ಗೋತಮ.
“ಹೀಗೆ “ಅಂಬಟ್ಠ, ತಲೆಯನ್ನು ಬೋಳಿಸಿಕೊಂಡು ತಲೆಯ ಮೇಲೆ ಬೂದಿ ಸುರಿಸುಕೊಂಡು ರಾಷ್ಟ್ರ ಅಥವಾ ನಗರದಿಂದ ಹೊರದೂಡಲ್ಪಟ್ಟ ಕ್ಷತ್ರಿಯನು ಪರಮ ದು:ಸ್ಥಿತಿಗೆ ಇಳಿಯುತ್ತಾನೆ. ಪರಮ ದು:ಸ್ಥಿತಿಗೆ ಕ್ಷತ್ರಿಯನು ಇಳಿದರೂ ಕ್ಷತ್ರಿಯರೇ ಶ್ರೇಷ್ಠರು, ಬ್ರಾಹ್ಮಣರು ಹೀನರು. ಬ್ರಹ್ಮನಲ್ಲಿ ಒಬ್ಬನಾದ ಸನಂಕುಮಾರನು ಈ ಗಾಥೆಯನ್ನು ಹೇಳಿದ್ದಾನೆ:
‘ಗೋತ್ರಗಳನನುಸರಿಸುವ ಜನತೆಯೊಳು ಶ್ರೇಷ್ಠ ಕ್ಷತ್ರಿಯನು
ದೇವ ಮಾನವರೊಳಗೆ ಶ್ರೇಷ್ಠನು ವಿಜ್ಜಾಚರಣ ಸಂಪನ್ನನು.’
“ಅಂಬಟ್ಠ, ಬ್ರಹ್ಮ ಸನಂಕುಮಾರನಿಂದ “ ಹೇಳಲ್ಪಟ್ಟ ಈ ಗಾಥೆಯು ದುರ್ಗೀತೆಯಲ್ಲ, ಸುಗೀತ. ದುರ್ಭಾಷಿತವಲ್ಲ, ಸುಭಾಷಿತ, ಅರ್ಥಹೀನವಲ್ಲ, ಅರ್ಥರಹಿತ. ನಾನೂ ಅದನ್ನು ಒಪ್ಪುತ್ತೇನೆ. ಆದುದರಿಂದ ನಾನು ಹೇಳುತ್ತೇನೆ:
“ಗೋತ್ರಗಳನನುಸರಿಸುವಾ ಜನತೆಯೊಳು ಶ್ರೇಷ್ಠ ಕ್ಷತ್ರಿಯನು
ದೇವಮಾನವರೊಳಗೆ ಶ್ರೇಷ್ಠನು ವಿಜ್ಜಾ ಚರಣ ಸಂಪನ್ನನು”
“ಗೋತಮ ‘ಚರಣ’ ವೆಂದರೇನು, ‘ವಿದ್ಯೆಗಳು’ ಯಾವುವು?”
ಜ್ಞಾನ ಮತ್ತು ಆಚರಣೆಗಳ ಬಗ್ಗೆ
“ಅಂಬಟ್ಠ, ಅನುತ್ತರವಾದ ವಿಜ್ಜಾ ಚರಣ ಸಂಪನ್ನತೆಯಲ್ಲಿ ಜಾತಿವಾದಿಯಾಗಲೀ, ಗೋತ್ರವಾದಿಯಾಗಲೀ (ಅಭಿ) ಮಾನವಾದಿಯಾಗಲೀ ಇರುವುದಿಲ್ಲ ‘ ನೀನು ನನ್ನಂತೆಯೇ ಅರಹಂತನಾಗಿದ್ದೀಯೆ, ಇಲ್ಲವೇ ನೀನು ನನ್ನಂತೆ ಅರಹಂತನಾಗಿಲ್ಲ’ ಎಂದಷ್ಟೇ ಹೇಳುತ್ತಾರೆ. “ಅಂಬಟ್ಠ, ವಿವಾಹ ಮಾಡಿಕೊಡುವಾಗ ವಿವಾಹವಾಗುವಾಗ ಜಾತಿ ಗೋತ್ರ ಅಂತಸ್ತುಗಳನ್ನು ಕುರಿತು ‘ನೀನು ನನ್ನಂತೆಯೇ ಅರ್ಹನಾದವನು, ನೀನು ನನ್ನಂತೆ ಅರ್ಹನಾಗಿಲ್ಲ’ ಎನ್ನುತ್ತಾರೆ. ಜಾತಿವಾದಕ್ಕೂ ಗೋತ್ರವಾದಕ್ಕೂ(ಅಭಿ) ಮಾನವಾದಕ್ಕೂ ಹೆಣ್ಣುಕೊಟ್ಟುತರುವ ಸಂಪ್ರದಾಯಕ್ಕೂ ಬಂಧಿತರಾದವರು ಅನುತ್ತರವಾದ ವಿಜ್ಞಾಚರಣ ಸಂಪನ್ನತೆಯಿಂದ ದೂರವಾಗುತ್ತಾರೆ. ಜಾತಿವಾದದ ಗೋತ್ರವಾದದ ಅಭಿಮಾನವಾದದ ಬಂಧನವನ್ನೂ ಹೆಣ್ಣು ತಂದು ಕೊಡುವ ಕಟ್ಟುಪಾಡನ್ನೂ ತ್ಯಜಿಸಿ ಅನುತ್ತರವಾದ ವಿಜ್ಜಾ ಚರಣ ಸಂಪನ್ನತೆಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕು.”
“ಹಾಗಾದರೆ ‘ಚರಣ’ ಯಾವುದು ‘ವಿಜ್ಜಾ’ ಯಾವುದು?”
[ಇಲ್ಲಿ ಸಾಮಾಞ್ಞ ಫಲ ಸುತ್ತದ 41ನೆಯ ಪ್ಯಾರಾದಿಂದ 63 ನೆಯ ಪ್ಯಾರಾದವರೆಗೂ 77 ರಿಂದ 99 ರವರೆಗೂ ಇರುವಂತೆ ಓದಿಕೊಳ್ಳಬೇಕು.]
‘ಭಿಕ್ಷುವಾದವನು ಹೀಗೆ ವಿಜ್ಜಾಸಂಪನ್ನನಾಗುತ್ತಾನೆ, ಚರಣ ಸಂಪನ್ನನಾಗುತ್ತಾನೆ, ವಿಜ್ಜಾ ಚರಣ ಸಂಪನ್ನನಾಗುತ್ತಾನೆ. “ಅಂಬಟ್ಠ, ಈ ಬಗೆಯ ವಿಜ್ಜಾ ಸಂಪನ್ನತೆಗಿಂತಲೂ, ಚರಣ ಸಂಪನ್ನತೆಗಿಂತಲೂ ಉತ್ತಮವಾದ ಶ್ರೇಷ್ಠವಾದ ಬೇರೆ ವಿದ್ಯಾಸಂಪನ್ನತೆಯಾಗಲೀ ಚರಣ ಸಂಪನ್ನತೆಯಾಗಲೀ ಇಲ್ಲ.
ನಾಲ್ಕು ಅಪಾಯ ಮುಖಗಳು
“ಅಂಬಟ್ಠ, ಅನುತ್ತರವಾದ ವಿಜ್ಜಾ ಚರಣಸಂಪನ್ನತೆಗೆ ನಾಲ್ಕು ಅಪಾಯ ಮುಖಗಳು ಇವೆ. ಆ ನಾಲ್ಕು ಯಾವುವು? ಒಬ್ಬ ಸಮಣನೋ ಬ್ರಾಹ್ಮಣನೋ ಅನುತ್ತರವಾದ ವಿಜ್ಜಾಚರಣಸಂಪನ್ನತೆಯನ್ನೂ ಗಳಿಸಿಕೊಳ್ಳದಿರುವಾಗ ಹೆಗಲಮೇಲೆ ಅಡ್ಡೆಯನ್ನಿಟ್ಟುಕೊಂಡು ‘ಕೆಳಗೆ ಬಿದ್ದ ಹಣ್ಣುಗಳನ್ನೇ ತಿಂದು ಬದುಕುತ್ತೇನೆ’ ಎಂದು ಅರಣ್ಯಕ್ಕೆ ಹೋದರೆ ವಿಜ್ಜಾಚರಣ ಸಂಪನ್ನನಿಗೆ ಪರಿಚಾರಿಕೆಯನ್ನು ಮಾಡಲು ಮಾತ್ರ ಅರ್ಹನಾಗುತ್ತಾನೆ. ಇದು ಮೊದಲನೆಯ ಅಪಾಯ.
“ಅಂಬಟ್ಠ, ಮೊತ್ತೊಬ್ಬ ಸಮಣನೋ ಬ್ರಾಹ್ಮಣನೋ ಅನುತ್ತರವಾದ ವಿಜ್ಞಾ ಚರಣ ಸಂಪನ್ನತೆಯನ್ನು ಇನ್ನೂ ಗಳಿಸಿಕೊಳ್ಳದಿರುವಾಗ ಬಿದ್ದ ಹಣ್ಣುಗಳನ್ನು ತಿಂದುಕೊಂಡೇ ಜೀವಿಸುವುದಕ್ಕೂ ಸಾಧ್ಯವಿಲ್ಲದಿರುವಾಗ ಗುದ್ದಲಿ ಬುಟ್ಟಿಗಳನ್ನು ಹೆಗಲ ಮೇಲಿಟ್ಟುಕೊಂಡು ‘ ಇನ್ನು ಮೇಲೆ ಗೆಡ್ಡೆ ಗೆನಸುಗಳನ್ನೇ ತಿಂದು ಜೀವಿಸುತ್ತೇನೆ’ ಎಂದುಕೊಂಡು ಆರಣ್ಯಕ್ಕೆ ಹೋದರೆ ಅವನು ವಿಜ್ಜಾ ಚರಣ ಸಂಪನ್ನನಾದವನಿಗೆ ಸೇವೆ ಪರಿಚಾರಿಕೆಗಳನ್ನು ಮಾಡಲು ಮಾತ್ರ ಅರ್ಹನಾಗುತ್ತಾನೆ. ಇದು ಎಡರನೆಯ ಅಪಾಯ.
“ಆತನು ಕಾಮಗಳಿಂದ ಅಕುಶಲ ಭಾವನೆಗಳಿಂದ ದೂರನಾಗಿ ಸುತರ್ಕ ಸುವಿಚಾರಗಳಿಂದ ಕೂಡಿದ ವಿವೇಕದಿಂದ ಹುಟ್ಟುವ ಪ್ರೀತಿಸುಖದ ಪ್ರಥಮ ಧ್ಯಾನದಲ್ಲಿರುತ್ತಾನೆ. ಈ ರೀತಿಯಲ್ಲಿ ಅವನು ತನ್ನ ಕಾಯವನ್ನು ವಿವೇಕದಿಂದ ಹುಟ್ಟುವ ಪ್ರೀತಿ ಸುಖದಿಂದ ಲೇಪಿಸಿಬಿಡುತ್ತಾನೆ. ಅದರಲ್ಲಿಯೆ ಲೀನವಾಗುತ್ತಾನೆ. ವಿವೇಕದಿಂದ ಹುಟ್ಟುವ ಪ್ರೀತಿ ಸುಖದಿಂದ ಸಂಪೂರ್ಣವಾಗಿ ಅವೃತವಾಗದ ಯಾವ ಒಂದು ಅಂಗವೂ ಅವನ ಕಾಯದಲ್ಲಿರುವುದಿಲ್ಲ.
“ಅಂಬಟ್ಠ, ಆ ಭಿಕ್ಷುವು ತರ್ಕ ಮತ್ತು ವಿಚಾರಗಳನ್ನೂ ದಾಟಿ ಕಾಮಗಳನ್ನು ಉಪಶಮನ ಮಾಡಿದ ಚಿತ್ತವನ್ನು ಸಂಪಾದಿಸಿಕೊಂಡು ಸಮಾಧಿಯಿಂದ ಹುಟ್ಟುವ ಮತ್ತು ತರ್ಕ ವಿಚಾರಗಳನ್ನು ಮೀರಿದ ದ್ವಿತೀಯ ಧ್ಯಾನದಲ್ಲಿರುತ್ತಾನೆ. ಆಗ ಅವನ ಚಿತ್ತವು, ಏಕಾಗ್ರತೆಯಿಂದ ಕೂಡಿರುತ್ತದೆ; ಶಾಂತಿಯಿಂದಿರುತ್ತದೆ. ಈ ರೀತಿಯಲ್ಲಿ ಅವನು ಸಮಾಧಿಯಿಂದ ಹುಟ್ಟುವ ಪ್ರೀತಿ ಸುಖದಿಂದ ತನ್ನ ಕಾಯವನ್ನು ಲೇಪಿಸಿ ಬಿಡುತ್ತಾನೆ. ಅದರಲ್ಲಿಯೇ ಲೀನವಾಗುತ್ತಾನೆ. ಸಮಾಧಿಯಿಂದ ಹುಟ್ಟುವ ಆನಂದ ಸುಖದಿಂದ ಸಂಪೂರ್ಣವಾಗಿ ಅವೃತವಾಗದ ಯಾವ ಅಂಗವೂ ಅವನ ಕಾಯದಲ್ಲಿರುವುದಿಲ್ಲ.
“ಅಂಬಟ್ಠ, ಅಷ್ಟೇ ಅಲ್ಲದೆ ಆ ಭಿಕ್ಷುವು ಪ್ರೀತಿರಾಗಗಳಿಂದ ದೂರವಾದ ಉಪೇಕ್ಖದಿಂದ ಕೂಡಿದ ಸ್ಮೃತಿಯನ್ನೇ ಪಡೆದಿದ್ದು ಕಾಯದಲ್ಲಿ ಸುಖವನ್ನು ಅನುಭವಿಸುತ್ತಿದ್ದು ಯಾವುದನ್ನು ಆರ್ಯರು‘ ಉಪೇಕ್ಖವನ್ನು ಸಾಧಿಸಿರುವವನೂ ಸ್ಮೃತಿವಂತನೂ ಪಡೆದಿರುವ ಸುಖ’ ಎನ್ನುತ್ತಾರೋ ಆ ತೃತೀಯ ಧ್ಯಾನ ದಲ್ಲಿರುತ್ತಾನೆ. ಈ ರೀತಿಯಲ್ಲಿ ಅವನ ಕಾಯವು ಆನಂದವನ್ನು ಮೀರಿದ ಸುಖದಿಂದ ಆವೃತವಾಗಿರುತ್ತದೆ, ತುಂಬಿರುತ್ತದೆ. ಆನಂದವನ್ನು ಮೀರಿದ ಸುಖದಿಂದ ಅವೃತವಾಗದ ಯಾವ ಅಂಗವೂ ಅವನ ಕಾಯದಲ್ಲಿರುವುದಿಲ್ಲ.
“ಅಷ್ಟೇ ಅಲ್ಲದೆ, ಅಂಬಟ್ಠ, ಆ ಭಿಕ್ಷುವು ಸುಖದುಃಖಗಳನ್ನು ಗೆದ್ದು ಮೊದಲು ಅನುಭವಿಸದ ಸುಮನಸ್ಸು ದುರ್ಮನಸ್ಸುಗಳನ್ನು ದೂರ ಮಾಡಿ ಸುಖದುಃಖಗಳನ್ನು ಮೀರಿದ ಪರಿಶುದ್ಧವಾದ ಉಪೇಕ್ಖ ಮನಸ್ಸನ್ನು ಪಡೆದು ಸ್ಮೃತಿವಂತನಾಗಿ ನಾಲ್ಕನೆಯ ಧ್ಯಾನದಲ್ಲಿರುತ್ತಾನೆ. ಪರಿಶುದ್ದವಾದ ಮನಸ್ಸಿನಿಂದ ಶಾಂತನಾಗಿ ಅವನು ಕುಳಿತುಕೊಳ್ಳುತ್ತಾನೆ. ಪರಿಶುದ್ಧತೆಯಿಂದ ಮತ್ತು ಶಾಂತಿಯಿಂದ ಆವೃತವಾಗದ ಯಾವ ಅಂಗವೂ ಅವನ ಕಾಯದಲ್ಲಿರುವುದಿಲ್ಲ.
“ಶಾಂತವಾದ ಪರಿಶುದ್ಧವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾಗಬಲ್ಲ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಆತನು ತನ್ನ ಚಿತ್ತವನ್ನು ಜ್ಞಾನದರ್ಶನದ ಕಡೆಗೆ ತಿರುಗಿಸುತ್ತಾನೆ. ಆತನಿಗೆ ಈ ತಿಳಿವಳಿಕೆ ಬರುತ್ತದೆ- ‘ಈ ನನ್ನ ಕಾಯವು ನಾಲ್ಕು ಮಹಾಭೂತಗಳಿಂದ ಮಾಡಲ್ಪಟ್ಟ ರೂಪವನ್ನು ಪಡೆದಿದೆ. ಮಾತಾಪಿತೃಗಳಿಂದ ಹುಟ್ಟಿದೆ. ಅನ್ನ ಸೂಪರಸಗಳಿಂದ ಪ್ರತಿ ಕ್ಷಣದಲ್ಲಿಯೂ ನವೀನತೆಯನ್ನು ಹೊಂದುತ್ತಿರುತ್ತದೆ. ಅಳಿದು ಹೋಗುವ ಸವೆದುಹೋಗುವ ಚೂರುಚೂರಾಗುವ ಸ್ವಭಾವವನ್ನುಳ್ಳದ್ದಾಗಿದೆ. ನನ್ನ ವಿಞ್ಞಾನವು (ಅರಿವಿನ ಉಚ್ಚ ಸ್ಥಿತಿ) ಪ್ರತಿಬಂಧಿತವಾಗಿ ಈ ಕಾಯಕ್ಕೆಅಂಟಿಕೊಂಡಿದೆ.
“ಅಂಬಟ್ಠ, ಇನ್ನೊಬ್ಬ ಸಮಣನೋ ಬ್ರಾಹ್ಮಣನೋ ವಿಜ್ಜಾ ಚರಣ ಸಂಪನ್ನತೆಯನ್ನು ಇನ್ನೂ ಗಳಿಸಿಕೊಳ್ಳದಿರುವಾಗ ಬಿದ್ದ ಹಣ್ಣುಗಳು ಮಾತ್ರವನ್ನೋ ಅಥವಾ ಗೆಡ್ಡೆ ಗೆಣಸುಗಳು ಮಾತ್ರವನ್ನೋ ತಿಂದು ಜೀವಿಸುವುದಕ್ಕೂ ಸಾಧ್ಯವಾಗದಾಗ ಗ್ರಾಮದ ಹತ್ತಿರವೋ ಪಟ್ಟಣದ ಹತ್ತಿರವೋ ಅಗ್ನಿಯ ಗುಡಿಯೊಂದನ್ನು ಕಟ್ಟಿಕೊಂಡು ಅಗ್ನಿಯನ್ನು ಪೂಜಿಸಲು ತೊಡಗಿದರೆ ಅವನು ವಿಜ್ಜಾ ಚರಣ ಸಂಪನ್ನನಾದವನಿಗೆ ಸೇವೆ ಪರಿಚಾರಿಕೆಗಳನ್ನು ಮಾಡಲು ಮಾತ್ರ ಅರ್ಹನಾಗಿರುತ್ತಾನೆ. ಇದು ಮೂರನೆಯ ಅಪಾಯ.
“ಅಂಬಟ್ಠ, ಮಗದೊಬ್ಬ ಸಮಣನೋ ಬ್ರಾಹ್ಮಣನೋ ವಿಜ್ಜಾ ಚರಣ ಸಂಪನ್ನತೆಯನ್ನು ಗಳಿಸಿಕೊಳ್ಳದಿರುವಾಗ ಬಿದ್ದ ಹಣ್ಣುಗಳಷ್ಟನ್ನೇ ಅಥವಾ ಗೆಡ್ಡೆ ಗೆಣಸುಗಳಷ್ಟನ್ನೇ ತಿಂದು ಜೀವಿಸಲೂ ಸಾಧ್ಯವಿಲ್ಲದಿರುವಾಗ ನಾಲ್ಕು ಮಹಾಪಥಗಳು ಕೂಡುವ ಕಡೆ ನಾಲ್ಕು ಬಾಗಿಲಿರುವ ಮನೆಯನ್ನು ಕಟ್ಟಿಕೊಂಡು “ನಾಲ್ಕು ದಿಕ್ಕಿನಿಂದ ಯಾವ ಬ್ರಾಹ್ಮಣನೇ ಅಥವ ಸಮಣನೇ ಬರಲಿ ಆ ಸಮಣ ಅಥವಾ ಬ್ರಾಹ್ಮಣನಿಗೆ ಯಥಾಶಕ್ತಿ ಯಥಾಬಲ ಅನುಕೂಲಗಳನ್ನೊದಗಿಸುತ್ತೇನೆ.’ ಎಂದುಕೊಂಡರೆ ವಿಜ್ಜಾ ಚರಣ ಸಂಪನ್ನನಾದವನಿಗೆ ಸೇವೆ ಪರಿಚಾರಿಕೆಗಳನ್ನು ಮಾಡಲು ಮಾತ್ರ ಅರ್ಹನಾಗಿರುತ್ತಾನೆ. ಅನುತ್ತರವಾದ ವಿಜ್ಜಾಚರಣ ಸಂಪನ್ನತೆಗೆ ಇರುವ ನಾಲ್ಕು ಅಪಾಯಗಳು ಇವು.
“ಅಂಬಟ್ಠ, ಈ ಅನುತ್ತರವಾದ ವಿಜ್ಜಾಚರಣ ಸಂಪನ್ನತೆಯನ್ನು ಗಳಿಸಿಕೊಳ್ಳಲು ನಿಮ್ಮ ಗುರುವಿನಿಂದ ಕಲಿತ್ತಿದ್ದೀಯಾ?”
“ಇಲ್ಲ, ಗೋತಮ. ಆಚಾರ್ಯನಿಂದ ಅನುತ್ತರವಾದ ವಿಜ್ಜಾಚರಣ ಸಂಪನ್ನತೆಯನ್ನು ಗಳಿಸಲು ನನಗೆ ಕಲಿಸಿರುವುದು ಅತಿ ಸ್ವಲ್ಪ.”
“ಹೋಗಲಿ, ಅಂಬಟ್ಠ, ಅನುತ್ತರವಾದ ವಿಜ್ಜಾಚರಣ ಸಂಪನ್ನತೆಯನ್ನು ಗಳಿಸದಿರುವಾಗ ಹೆಗಲ ಮೇಲೆ ಅಡ್ಡಯನ್ನಿಟ್ಟುಕೊಂಡು9 ‘ಬಿದ್ದ ಹಣ್ಣುಗಳನ್ನು ಮಾತ್ರವೇ ತಿಂದು ಜೀವಿಸುತ್ತೇನೆ’ ಎಂದು ಹೇಳಿ ಅರಣ್ಯಕ್ಕೆ ಹೋಗುವ ಸಾಮರ್ಥವನ್ನಾದರೂ ಆಚಾರ್ಯನಿಂದ ಕಲಿತುಕೊಂಡಿದ್ದೀಯಾ?” “ಇಲ್ಲ ಗೋತಮ”
“ಅಂಬಟ್ಠ, ಅನುತ್ತರವಾದ ವಿಜ್ಜಾಚರಣ ಸಂಪನ್ನತೆಯನ್ನು ಗಳಿಸದಿರುವಾಗ ಬಿದ್ದ ಹಣ್ಣುಗಳನ್ನು ತಿಂದೇ ಜೀವಿಸಲು ಸಾಮರ್ಥ್ಯವು ಬರದಿದ್ದಾಗ ಗೆಡ್ಡೆ ಗೆಣಸುಗಳನ್ನೇ ತಿಂದು ಜೀವಿಸಲು ಗುದ್ದಲಿ ಬುಟ್ಟಿಗಳನ್ನು ಹಿಡಿದುಕೊಂಡು ಅರಣ್ಯಕ್ಕೆ ಹೋಗುವ ಸಾಮರ್ಥ್ಯವನ್ನಾದರೂ ಆಚಾರ್ಯನಿಂದ ಕಲಿತುಕೊಂಡಿದ್ದೀಯೋ?” “ಇಲ್ಲ, ಗೋತಮ”
“ಹೋಗಲಿ, “ಅಂಬಟ್ಠ, ಅನುತ್ತರವಾದ ವಿಜ್ಜಾಚರಣ ಸಂಪನ್ನತೆಯನ್ನು ಗಳಿಸದಿರುವಾಗ ಬಿದ್ದ ಹಣ್ಣುಗಳನ್ನೇ ತಿಂದು ಜೀವಿಸುವ ಮತ್ತು ಗೆಡ್ಡೆ ಗೆಣಸುಗಳನ್ನೇ ತಿಂದು ಜೀವಿಸುವ ಸಾಮರ್ಥ್ಯಗಳನ್ನು ಗಳಿಸದಿರುವಾಗ ಗ್ರಾಮದ ಹತ್ತಿರವೋ ಪಟ್ಟಣದ ಹತ್ತಿರವೋ ಅಗ್ನಿಯ ಗುಡಿಯನ್ನು ಕಟ್ಟಿಕೊಂಡು ಅಗ್ನಿಯನ್ನು ಪೂಜಿಸುವುದನ್ನು ಆಚಾರ್ಯನಿಂದ ಕಲಿತಿದ್ದೀಯಾ?” “ಇಲ್ಲ, ಗೋತಮ”
“ಅಂಬಟ್ಠ, ಅನುತ್ತರವಾದ ವಿಜ್ಜಾಚರಣ ಸಂಪನ್ನತೆಯನ್ನು ಗಳಿಸದಿರುವಾಗ ಬಿದ್ದ ಹಣ್ಣುಗಳನ್ನೇ ತಿಂದು ಜೀವಿಸುವ ಸಾಮರ್ಥ್ಯವನ್ನಾಗಲೀ, ಗೆಡ್ಡೆ ಗೆಣಸುಗಳನ್ನು ತಿಂದು ಬದುಕುವ ಸಾಮರ್ಥ್ಯವನ್ನಾಗಲೀ, ಗಳಿಸದಿರುವಾಗ ಅಗ್ನಿಯನ್ನು ಪೂಜೆ ಮಾಡುವುದು ಬರದಿರುವಾಗ ‘ ನಾಲ್ಕು ಮಹಾಪಥಗಳು ಕೂಡುವ ಕಡೆ ನಾಲ್ಕು ಬಾಗಿಲುಗಳಿರುವ ಮನೆಯನ್ನು ಕಟ್ಟಿಕೊಂಡು “ನಾಲ್ಕು ದಿಕ್ಕಿನಿಂದ ಯಾವ ಸಮಣನೋ ಬ್ರಾಹ್ಮಣನೋ ಬರಲಿ ಅವನನ್ನು ಸಾಧ್ಯವಾದಷ್ಟು ಮಟ್ಟಿಗೆ ಅನುಕೂಲಗಳನ್ನೊದಗಿಸುತ್ತೇನೆ.’ ಎನ್ನುವುದನ್ನಾದರೂ ಆಚಾರ್ಯನಿಂದ ಕಲಿತಿದ್ದೀಯಾ?” “ಇಲ್ಲ, ಗೋತಮ”
“ಅಂಬಟ್ಠ, ಆಚಾರ್ಯನಿಂದ ಅನುತ್ತರವಾದ ವಿಜ್ಜಾಚರಣ ಸಂಪನ್ನತೆಯನ್ನು ಕಲಿತಿಲ್ಲ. ಆಚಾರ್ಯನಿಂದ ಅನುತ್ತರವಾದ ವಿಜ್ಜಾಚರಣ ಸಂಪನ್ನತೆಗೆ ಇರುವ ನಾಲ್ಕು ಅಪಾಯ ಮುಖಗಳೊಂದನ್ನು ಕಲಿತಿಲ್ಲ. ಅಂಬಟ್ಟ, ಆಚಾರ್ಯನಾದ ಬ್ರಾಹ್ಮಣ ಪೋಕ್ಖರಸಾತಿಯಿಂದ ಈ ಮಾತುಗಳನ್ನು ಕೇಳಿದ್ದೀಯಲ್ಲವೇ? 10ಮುಂಡನವನ್ನು ಮಾಡಿಸಿಕೊಂಡಿರುವವರೂ ಸಮಣರೂ ಕಪ್ಪು ಸೇವಕರೂ, ಬ್ರಹ್ಮನ ಪಾದದಿಂದ ಹುಟ್ಟಿದವರೂ ಆದ ಇವರ್ಯಾರು? ಆದರೆ ಆತನೇ ತನ್ನ ಸಣ್ಣ ಕರ್ತವ್ಯಗಳನ್ನು ಮಾಡುತ್ತಿಲ್ಲ. ನೋಡು ಅಂಬಟ್ಠ, ಆಚಾರ್ಯ ಪೋಕ್ಖರಸಾತಿ ಬ್ರಾಹ್ಮಣನಿಂದ ನಿನಗೆ ಆಗಿರುವ ದೊಡ್ಡ ತಪ್ಪನ್ನು.
ಪುರಾತನ ಋಷಿಗಳ ಧ್ಯಾನ ಚಿಂತನೆಗಳು
“ಅಂಬಟ್ಟ, ಪೋಕ್ಖರಸಾತಿ ಬ್ರಾಹ್ಮಣನು ಕೋಸಲದ ರಾಜನ ದತ್ತಿಯಿಂದ ಜೀವಿಸುತ್ತಿದ್ದಾನೆ. ಕೋಸಲದ ರಾಜ ಪಸೇನದಿಯು ತನ್ನ ಸಮ್ಮುಖಕ್ಕೆ ಅವನನ್ನು ಸೇರಿಸುವುದಿಲ್ಲ. ಅವನೊಂದಿಗೆ ಮಂತ್ರಾಲೋಚನೆ ಮಾಡುವಾಗಲೆಲ್ಲಾ ಪರದೆಯ ಹಿಂದೆಯೇ ನಿಂತು ಮಾತನಾಡುತ್ತಾನೆ. ಅಂಬಟ್ಠ, ತಾನು ಕೊಟ್ಟ ಭಿಕ್ಷವನ್ನು ಪರಿಗ್ರಹಿಸಿರುವವನನ್ನು ಕೋಸಲದ ರಾಜ ಪಸೇನದಿಯು ತನ್ನ ಸಮ್ಮುಖಕ್ಕೆ ಸೇರಿಸುವುದಿಲ್ಲವೇಕೆ? ಆಚಾರ್ಯನಾದ ಪೋಕ್ಖರಸಾತಿ ಬ್ರಾಹ್ಮಣನಿಂದ ನಿನಗಾಗಿರುವ ದೊಡ್ಡ ತಪ್ಪನ್ನು ನೋಡು.
“ಅಂಬಟ್ಟ, ಕೋಸಲದ ರಾಜ ಪಸೇನದಿಯು ಆನೆಯ ಮೇಲೆ ಕುಳಿತಿದ್ದಾಗಲೋ, ಕುದುರೆಯ ಮೇಲೆ ಕುಳಿತಿದ್ದಾಗಲೋ, ರಥದ ಮುಂಭಾಗದಲ್ಲಿ ನಿಂತೋ ಮುಖ್ಯಸ್ಥರೊಂದಿಗೆ ಬೇರೆ ರಾಜರೊಂದಿಗೆ ಅಥವಾ ಬೇರೆ ರಾಜದ ಕುಮಾರರೊಂದಿಗೆ ರಾಜ್ಯದ ವಿಷಯವನ್ನು ಮಾತನಾಡುತ್ತಿರುತ್ತಾನೆನ್ನು. ಆತನು ಆ ಪ್ರದೇಶದಿಂದ ಹೊರಟು ಬೇರೊಂದು ಕಡೆಗೆ ನಿಲ್ಲುತ್ತಾನೆನ್ನು. ಆಗ ಒಬ್ಬ ಶೂದ್ರನೋ ಅಥವಾ ಅವನ ದಾಸನೋ ಅಲ್ಲಿಗೆ ಆ ಪ್ರದೇಶದಲ್ಲಿ ನಿಂತು ಹೀಗೆ ಹೇಳುತ್ತಾನೆನ್ನು: ‘ಕೋಸಲದ ರಾಜ ಪಸೇನದಿಯು ಹೀಗೆ ಹೇಳಿದ: ಕೋಸಲದ ರಾಜ ಪಸೇನದಿಯು ಹೀಗೆ ಹೇಳಿದ’ ಅವನು ರಾಜನಂತೆಯೇ ಮಾತನಾಡಿದರೂ ರಾಜನಂತೆಯೆ ಮಂತ್ರಾಲೋಚನೆ ಮಾಡಿದರೂ ಅವನು ರಾಜನೋ ರಾಜನ ಅಮಾತ್ಯನೋ ಆಗುತ್ತಾನೆಯೇ?” “ಇಲ್ಲ, ಗೋತಮ”
“ಹೀಗೆಯೇ ಅಂಬಟ್ಠ, ಪೂರ್ವಕಾಲದ ಋಷಿಗಳೂ ಮಂತ್ರದಾತಾರರೂ ಮಂತ್ರಗಳನ್ನು ವಾಚಿಸುತ್ತಿದ್ದವವರೂ ಹೇಗೆ ಮಂತ್ರಗಳನ್ನು ಪಠಿಸಿದರೋ ಹಾಗೆಯೇ ಇಂದಿನ ಬ್ರಾಹ್ಮಣರೂ ಹಾಡುವವರೂ, ಪಠಿಸುವವರೊ ಪುನ: ಪುನ: ಪಠಿಸುವವರೊ ಪುನ: ವಾಚಿಸುವವರೂ ಪಠಿಸಬಲ್ಲರೆ? ಆಚಾರ್ಯರಿಂದ ಮಂತ್ರಗಳನ್ನು ಕಲಿತ ನಾನು ಹಿಂದಿನ ಋಷಿಗಳಾದ ಅಟ್ಠಕವಾಮಕ, ವಾಮದೇವ, ವಿಸ್ಸಾಮಿತ್ತ (ವಿಶ್ವಾಮಿತ್ರ), ಯಮತಗ್ಗಿ (ಜಮದಗ್ನಿ), ಅಂಗೀರಸ, ಭರದ್ಧಾಜ (ಭಾರದ್ವಾಜ), ವೇಸಟ್ಟ (ವಸಿಷ್ಟ), ಕಸ್ಸಪ (ಕಶ್ಯಪ), ಭುಗ (ಭೃಗು), ಋಷಿಗಳಂತೆಯೇ ಹೇಳಿದಂತೆಯೇ ಹೇಳುತ್ತೇನೆ ಎಂದರೆ ನೀನು ಋಷಿಯಾಗಲಾರೆ, ಋಷಿ ಸ್ಥಾನವನ್ನು ಮುಟ್ಟಲಾರೆ, ಅಂಥ ಪರಿಸ್ಥಿತಿ ಇರುವುದೇ ಇಲ್ಲ.
“ಅಂಬಟ್ಠ, ವೃದ್ಧರಾದ ಬ್ರಾಹ್ಮಣರು ಹಿರಿಯರು ಆಚಾರ್ಯ ರು ಅವರ ಆಚಾರ್ಯರು ಹೇಳುತ್ತಿದ್ದುದನ್ನು ಕೇಳಿರುವೆಯಲ್ಲವೆ? ‘ಪೂರ್ವದ ಋಷಿಗಳೂ ಬ್ರಾಹ್ಮಣರೂ ಮಂತ್ರದಾತಾರರೂ ಮಂತ್ರಗಳನ್ನು ಹೇಳಿದವರೂ ಆದ ಅಟ್ಠಕ ವಾಮಕ ವಾಮದೇವ ವಿಸ್ಸಾಮಿತ್ತ ಯಮತಗ್ಗಿ ಅಂಗೀರಸ ಭರದ್ವಾಜ ವೀಸಟ್ಠ, ಕಸ್ಸಪ ಭೃಗು ಮುಂತಾದವರು ಅವರಂತೆಯೇ ಗಾಯನ ಮಾಡುವವರೂ ಮಂತ್ರಗಳನ್ನು ಹೇಳುವವರೂ ವಾಚಿಸುವವರೂ ಪುನ: ಪುನ: ಪಠಿಸುವವರು ಪುನ: ಪುನ: ವಾಚಿಸುವವರೂ ಇಂದಿನ ಬ್ರಾಹ್ಮಣರೂ ಆದ ನಿನ್ನಂತೆ ಮತ್ತು ನಿನ್ನ ಗುರುವಿನಂತೆ ತಲೆಬಾಚಿಕೊಂಡು ಕೂದಲು ಗಡ್ಡಗಳಿಗೆ ಗಂಧ ಹಚ್ಚಿಕೊಂಡು ರತ್ನದ ಕುಂಡಲ ಆಭರಣಗಳನ್ನು ಧರಿಸಿಕೊಂಡು ಬಿಳಿಯ ಬಟ್ಟೆಗಳನ್ನು ಹಾಕಿಕೊಂಡು ಐದು ಕಾಮ ಗುಣಗಳನ್ನು ಸವಿಯುತ್ತಾ ಓಡಾಡುತ್ತಿದ್ದರು ಎಂದು ಹೇಳಿರುವರೇ?” “ಇಲ್ಲ, ಗೋತಮ.”
“.... ನೀನೂ ಮತ್ತು ನಿನ್ನ ಆಚಾರ್ಯನೂ ಮಾಡುವಂತೆ ಅವರು ಕಪ್ಪು ಧಾನ್ಯಗಳನ್ನೆಲ್ಲಾ ಆರಿಸಿದ ಒಳ್ಳೆಯ ಅಕ್ಕಿಯಿಂದಲೇ ಮಾಡಿದ ಅನ್ನವನ್ನು ವಿವಿಧ ಬಗೆಯ ಪದಾರ್ಥಗಳನ್ನು ಅನೇಕ ಸೂಪಗಳನ್ನು ಅನೇಕ ವ್ಯಂಜನಗಳನ್ನೂ ತಿಂದುಕೊಂಡಿರುತ್ತಿದ್ದರೇ?” “ಇಲ್ಲ, ಗೋತಮ”
“ನೀನೂ ಮತ್ತು ನಿನ್ನ ಹಿಂದಿನ ಆಚಾರ್ಯರು ಚೆನ್ನಾಗಿ ಶೃಂಗರಿಸಿಕೊಂಡ ನಾರಿಯರಿಂದ ಪರಿಚಾರಿಕೆಯನ್ನು ಮಾಡಿಸಿಕೊಳ್ಳುವಂತೆ ಅವರು ಮಾಡಿಸಿಕೊಳ್ಳುತ್ತಿದ್ದರೇ?” “ಇಲ್ಲ ಗೋತಮ.”
“.... ನೀನೂ ಮತ್ತು ನಿನ್ನ ಇಂದಿನ ಆಚಾರ್ಯನೂ ಮಾಡುವಂತೆ ಅವರು ಶೃಂಗರಿಸಿದ ಕುದುರೆಗಳಿಂದ ಕೂಡಿದ ರಥಗಳಲ್ಲಿಯೇ ಕುಳಿತು ಅಂದವಾದ ಚಾವಣಿಗಳನ್ನು ಹಿಡಿದು ವಾಹನಗಳನ್ನು ಬಿಟ್ಟುಕೊಂಡು ಹೋಗುತ್ತಿದ್ದರೇ?” “ಇಲ್ಲ ಗೋತಮ.”
“ನೀನೂ ಮತ್ತು ನಿನ್ನ ಇಂದಿನ ಆಚಾರ್ಯನೂ ಮಾಡುವಂತೆ ಅವರು ಕಬ್ಬಿಣದ ತಾಳಗಳೂ ಬಾಗಿಲುಗಳೂ ಇರುವ ಆಳವಾದ ಕಂದಕಗಳಿಂದ ಅವೃತವಾಗಿರುವ ಮತ್ತು ಹರಿತವಾದ ಖಡ್ಗಗಳನ್ನು ಹಿಡಿದ ಪುರುಷರಿಂದ ರಕ್ಷಿತವಾದ ನಗರಗಳಲ್ಲಿಯೇ ವಾಸಿಸುತ್ತಿದ್ದರೇ?” “ಇಲ್ಲ, ಗೋತಮ”.
“ಅಂಬಟ್ಟ, ಹಾಗದರೆ ನೀನಾಗಲೀ ನಿನ್ನ ಆಚಾರ್ಯನಾಗಲೀ ಋಷಿಯೂ ಅಲ್ಲ, ಋಷಿಗಳಂತೆ ಜೀವಿಸುತ್ತಲೂ ಇಲ್ಲ. ನನ್ನ ಬಗೆಗೆ ಸಂಶಯವಾಗಲೀ ಕೆಟ್ಟ ಭಾವನೆಯಾಗಲೀ ಇದ್ದರೆ ಕೇಳು. ನಾನು ವಿವರಿಸುತ್ತೇನೆ”.
ಎರಡು ಮಹಾಪುರುಷ ಲಕ್ಷಣಗಳ ದರ್ಶನ
ಆಮೇಲೆ ಭಗವಾನರು ವಿಹಾರದಿಂದ ನಿಷ್ಕ್ರಮಿಸಿ ಹೊರಗೆ ಅಡ್ಡಾಡುತ್ತಿದ್ದರು. ಅಂಬಟ್ಠನೂ ವಿಹಾರದಿಂದ ನಿಷ್ಕ್ರಮಿಸಿ ಹೊರಗೆ ಅಡ್ಡಾಡುತ್ತಿದ್ದನು. ಆಗ ಯುವಕ ಅಂಬಟ್ಠನು ಅಡ್ಡಾಡುತ್ತಿರುವ ಭಗವಾನ ಕಾಯದಲ್ಲಿನ ಮೂವತ್ತೆರಡು ಮಹಾಪುರಷ ಲಕ್ಷಣಗಳನ್ನು ಪರೀಕ್ಷಿಸಿದನು. ಯುವಕ ಅಂಬಟ್ಠನು ಎರಡೂ ಹೊರತು ಎಲ್ಲ ಮಹಾಪುರಷ ಲಕ್ಷಣಗಳನ್ನು ಭಗವಾನರ ಶರೀರದಲ್ಲಿ ಕಂಡನು. ಈ ಎರಡು ಮಹಾಪುರಷ ಲಕ್ಷಣಗಳ ಬಗೆಗೆ - ಅಂದರೆ ಕೋಶದಿಂದ ಅವೃತವಾದ ಗುಹ್ಯವಸ್ತು ಮತ್ತು ನಾಲಿಗೆಯ ಉದ್ದ-ಅವನಿಗೆ ಸಂದೇಹ ಬಂದಿತು. ತೃಪ್ತಿಯಾಗಲಿಲ್ಲ. ನಿರ್ಧಾರಕ್ಕೂ ಬರಲಾಗಲಿಲ್ಲ.
ಆಗ ಭಗವಾನರಿಗೆ ಹೀಗೆನಿಸಿತು. “ಯುವಕ ಅಂಬಟ್ಠನು ಎರಡನ್ನು ಬಿಟ್ಟು ನನ್ನಲ್ಲಿರುವ ಮೂವತ್ತೆರಡು ಮಹಾಪುರಷ ಲಕ್ಷಣಗಳನ್ನು ನೋಡಿದ್ದಾನೆ. ಈ ಎರಡು ಮಹಾಪುರಷ ಲಕ್ಷಣಗಳ ಬಗೆಗೆ- ಅಂದರೆ ಕೋಶದಿಂದ ಆವೃತವಾದ ಗುಹ್ಯವಸ್ತು ಮತ್ತು ದೊಡ್ಡ ನಾಲಿಗೆ - ಅವನು ಸಂಶಯ ಪಡುತ್ತಿದ್ದಾನೆ. ಅತೃಪ್ತಿಯಿಂದಿದ್ದಾನೆ. ನಿರ್ಧಾರಕ್ಕೆ ಬರಲಾರದವನಾಗಿದ್ದಾನೆ”. ಆಗ ಭಗವಾನರು ತಮ್ಮ ಋದ್ಧಿ ಶಕ್ತಿಯಿಂದ ತಮ್ಮ ಪ್ರತಿರೂಪವನ್ನೇ ತೋರಿಸಿದಾಗ ಯುವಕ ಅಂಬಟ್ಠನು ಕೋಶದಲ್ಲಿ ಅವೃತವಾದ ಗುಹ್ಯ ವಸ್ತುವನ್ನು ನೋಡಿದನು. ಆಮೇಲೆ ಭಗವಾನರು ತಮ್ಮ ನಾಲಿಗೆಯನ್ನು ಹೊರಕ್ಕೆ ತಂದು ಎರಡು ಕಿವಿಗಳಿಗೂ ಮುಟ್ಟಿಸಿದರು. ಎರಡು ಮೂಗಿನ ಹೊಳ್ಳೆಗಳಿಗೂ ಮುಟ್ಟಿಸಿದರು. ಲಲಾಟಮಂಡಲದ (ಹಣೆ) ಸುತ್ತಲೂ ತಂದರು. ಆಗ ಯುವಕ ಅಂಬಟ್ಠನು ಹೀಗೆಂದುಕೊಂಡನು: “ಸಮಣ ಗೋತಮನು ಮೂವತ್ತೆರಡು ಮಹಾಪುರಷ ಲಕ್ಷಣಗಳಿಂದ ಪರಿಪೂರ್ಣನಾಗಿದ್ದಾನೆ. ಯಾವೊಂದು ಕೊರೆತೆಯೂ ಕಾಣುವುದಿಲ್ಲ”. ಆಮೇಲೆ ಭಗವಾನರನ್ನು ಕುರಿತು ಹೀಗೆಂದನು- “ನನಗೆ ಬಹು ಕೆಲಸವಿದೆ ಗೋತಮ, ನಾನಿನ್ನು ಹೋಗುತ್ತೇನೆ.” ಆಂಬಟ್ಟ, ನಿನಗೆ ಉಚಿತ ತೋರಿದಂತೆ ಮಾಡು”.
ಯುವಕ ಅಂಬಟ್ಠನು ಕುದರೆ ರಥವನ್ನೇರಿ ಹೊರಟು ಹೋದನು. ಆ ಸಮಯದಲ್ಲಿ ಪೋಕ್ಖರಸಾತಿ ಬ್ರಾಹ್ಮಣನು ದೊಡ್ಡ ಬ್ರಾಹ್ಮಣ ಗುಂಪಿನೊಂದಿಗೆ ಉಕಟ್ಟಾದಿಂದ ಹೊರಟು ತನ್ನ ಆರಾಮದಲ್ಲಿ ಕುಳಿತು ಯುವಕ ಅಂಬಟ್ಠನಿಗಾಗಿ ಕಾಯುತ್ತಿದ್ದನು. ಯುವಕ ಅಂಬಟ್ಠನು ಆ ಆರಾಮಕ್ಕೆ ಬಂದನು. ಎಲ್ಲಿಯವರೆಗೆ ವಾಹನದ ಮೇಲೆ ಹೋಗಬಹುದೋ ಅಷ್ಟು ದೂರ ಯಾನದಲ್ಲಿ ಹೋಗಿ ಆಮೇಲೆ ಯಾನದಿಂದ ಇಳಿದು ಪೋಕ್ಖರಸಾತಿ ಬ್ರಾಹ್ಮಣನಿರುವಲ್ಲಿಗೆ ನಡೆದು ಬಂದನು. ಪೋಕ್ಖರಸಾತಿ ಬ್ರಾಹ್ಮಣನಿಗೆ ಅಭಿವಂದಿಸಿ ಒಂದು ಕಡೆ ಕುಳಿತುಕೊಂಡನು.
ಒಂದು ಕಡೆ ಕುಳಿತುಕೊಂಡ ಯುವಕ ಅಂಬಟ್ಠನನ್ನು ಕುರಿತು ಪೋಕ್ಖರಸಾತಿ ಬ್ರಾಹ್ಮಣನು ಹೀಗೆಂದನು: “ಮಗು ಅಂಬಟ್ಠ, ಭಗವಂತ ಗೋತಮನನ್ನು ನೋಡಿದೆಯಾ”.
“ಭಗವಂತನನ್ನು ನೋಡಿದೆವು.”
“ಮಗು ಅಂಬಟ್ಠ, ಭಗವಂತ ಗೋತಮನು ನಾನು ಹೇಳಿದಂತೆಯೇ ಇದ್ದಾನೆಯೇ ಅಥವಾ ಇಲ್ಲವೊ? ನಾನು ವರ್ಣಿಸಿದಂತೆಯೇ ಕಾಣತ್ತಾನೆಯೋ ಅಥವಾ ಬೇರೆಯಾಗಿ ತೋರುತ್ತಾನೋ?” “ಗೋತಮನು ನೀವು ವರ್ಣಿಸಿದಂತೆಯೇ ಇದ್ದಾನೆ. ಬೇರೆಯಾಗಿಲ್ಲ. ನೀವು ವರ್ಣಿಸಿದಂತೆಯೇ ತೋರುತ್ತಾನೆ, ಬೇರೆಯಾಗಿ ಅಲ್ಲ. ಗೋತಮನು ಮೂವತ್ತೆರಡು ಮಹಾಪುರಷ ಲಕ್ಷಣಗಳಿಂದ ಪರಿಪೂರ್ಣನಾಗಿದ್ದಾನೆ, ಅಪೂರ್ಣನಾಗಿಲ್ಲ”.
“ಹಾಗದರೆ, ಮಗು ಅಂಬಟ್ಠ, ಸಮಣ ಗೋತಮನೊಂದಿಗೆ ಏನಾದರೂ ಮಾತನಾಡಿದೆಯಾ?”
“ಹೌದು, ಸಮಣ ಗೋತಮನೊಂದಿಗೆ ಸಲ್ಲಾಪ ಮಾಡಿದೆ.”
“ಮಗು ಅಂಬಟ್ಠ, ಸಮಣಗೋತಮನೊಂದಿಗೆ ಹೇಗೆ ಏನ್ನನು ಕುರಿತು ಮಾತನಾಡಿದೆ?” ಆಗ ಯುವಕ ಅಂಬಟ್ಠನು ಭಗವಾನರೊಂದಿಗೆ ಏನೇನು ಸಲ್ಲಾಪ ಮಾಡಿದ್ದನೋ ಅದೆಲ್ಲವನ್ನು ಬ್ರಾಹ್ಮಣ ಪೋಕ್ಖರಸಾತಿಗೆ ಹೇಳಿದನು.
ಇದನ್ನು ಕೇಳಿದ ಮೇಲೆ ಪೋಕ್ಖರಸಾತಿ ಬ್ರಾಹ್ಮಣನು ಯುವಕ ಅಂಬಟ್ಠನನ್ನು ಕುರಿತು ಹೀಗೆಂದನು: “ಆಹಾ, ನಮ್ಮವನು ಎಂಥ ಪಂಡಿತ ಪುತ್ರ! ನಮ್ಮವನು ಹೇಗೆ ಬಹುಶ್ರುತನಂತೆ ಮಾತನಾಡುತ್ತಾನೆ! ನಮ್ಮವರು ಹೇಗೆ ಮೂರು ವೇದಗಳನ್ನು ತಿಳಿದವನಂತೆ ಮಾತನಾಡುತ್ತಾನೆ! ಈ ರೀತಿಯಲ್ಲಿ ಮಾತನಾಡುವ ಮನುಷ್ಯನು ಮರಣದಿಂದ ಕಾಯುವ ಬೇರೆಯಾದಗ ಅಪಾಯವಾದ ದುರ್ಗತಿಯಲ್ಲಿ ಅತ್ಯಂತ ಕೆಳಗಿನ ಲೋಕವಾದ ನಿರಯದಲ್ಲಿ ಹುಟ್ಟುತ್ತಾನೆ. ನೀನು ಹಾಗೆ ಮಾತನಾಡಿದುದರಿಂದ ಗೋತಮನು ನಮ್ಮನ್ನು ಕುರಿತು ಆ ರೀತಿಯಲ್ಲಿ ಮಾತನಾಡಿದನು. ಓ, ಪಂಡಿತನಂತೆ ಬಹುಶ್ರುತನಂತೆ ತ್ರಿವೇದಗಳನ್ನು ತಿಳಿದವನಂತೆ ಮಾತನಾಡವವನೇ’ ನೀನು ಹಾಗೆ ಮಾತನಾಡಿದುದರಿದ ಮರಣ ಹೊಂದಿದ ಮೇಲೆ ಅಪಾಯಕಾರಿಯಾದ ದುರ್ಗತಿಯಲ್ಲಿ ಅತ್ಯಂತ ಕೆಳಗಿನ ಲೋಕವಾದ ನಿರಯದಲ್ಲಿ ಹುಟ್ಟುತ್ತೀಯಲ್ಲವೇ?” ಎಂದು ಕೋಪಗೊಂಡು ಮನಸ್ಸಿನ ಮೇಲೆ ಹತೋಟಿಯನ್ನು ಕಳೆದುಕೊಂಡು ಯುವಕ ಅಂಬಟ್ಠನನ್ನು ಕಾಲಿನಿಂದ ಒದ್ದನು. ಆಗಲೇ ಭಗವಂತ ಗೋತಮರನ್ನು ನೋಡುವುದಕ್ಕೆ ಹೋಗಲು ಇಚ್ಚಿಸಿದನು.
ಪೋಕ್ಖರಸಾತಿ ಬುದ್ಧರ ಬಳಿಗೆ ಹೋಗುವುದು
ಆಗ ಅಲ್ಲಿದ್ದ ಬ್ರಾಹ್ಮಣರು ಪೋಕ್ಖರಸಾತಿ ಬ್ರಾಹ್ಮಣನಿಗೆ ಹೀಗೆ ಹೇಳಿದರು: “ಸಮಣಗೋತಮನನ್ನು ನೋಡಲು ಹೋಗುವುದಕ್ಕೆ ಇದು ಸರಿಯಾದ ಕಾಲವಲ್ಲ. ಪೋಕ್ಖರಸಾತಿಯು ಸಮಣ ಗೋತಮನನ್ನು ನೋಡಲು ನಾಳೆ ಹೋಗಬಹುದು”. ಪೋಕ್ಖರಸಾತಿ ಉತ್ತಮವಾದ ಮತ್ತು ತನ್ನ ಮನೆಯ ರುಚಿಯಾದ ಖಾದ್ಯ ಪದಾರ್ಥಗಳ ಊಟವನ್ನು ಮಾಡಿ ವಾಹನವನ್ನು ಏರಿ ಪಂಜುಗಳೊಡನೆ ಉಕ್ಕಟ್ಟಕ್ಕೆ ಹೋದನು. ಆಮೇಲೆ ಇಚ್ಛಾನಂಗಲವನಕ್ಕೆ ಎಲ್ಲಿಯವರೆಗೂ ವಾಹನದಲ್ಲಿ ಹೋಗಬಹುದೋ ಅಷ್ಟು ದೂರ ವಾಹನದಲ್ಲಿಯೂ ಆಮೇಲೆ ವಾಹನವನ್ನಿಳಿದು ಕಾಲ್ನಡಿಗೆಯಲ್ಲಿಯೂ ಭಗವಂತನಲ್ಲಿಗೆ ಹೋದನು. ಸಮೀಪಕ್ಕೆ ಹೋಗಿ ಭಗವಂತನಿಗೆ ಶುಭವನ್ನು ಹೇಳಿ ಒಂದು ಕಡೆ ಕುಳಿತುಕೊಂಡನು.
ಪೋಕ್ಖರಸಾತಿ ಬ್ರಾಹ್ಮಣನು ಭಗವಾನರನ್ನು ಕುರಿತು ಹೀಗೆಂದನು. ‘ಗೋತಮ, ನಮ್ಮ ಶಿಷ್ಯನಾದ ಯುವಕ ಅಂಬಟ್ಠನು ಇಲ್ಲಿಗೆ ಬಂದಿದ್ದನಲ್ಲವೇ?”
“ಅಹುದು ಬ್ರಾಹ್ಮಣ, ಶಿಷ್ಯನಾದ ಯುವಕ ಅಂಬಟ್ಠನು ಇಲ್ಲಿಗೆ ಬಂದಿದ್ದನು.”
“ಗೋತಮ, ಯುವಕ ಅಂಬಟ್ಠನೊಂದಿಗೆ ಏನೇನೋ ಸಲ್ಲಾಪ ಮಾಡಿದೆಯಲ್ಲವೇ?”
“ಅಹುದು ಬ್ರಾಹ್ಮಣ. ಯುವಕ ಅಂಬಟ್ಠನೊಂದಿಗೆ ಏನೇನನ್ನೋ ಸಲ್ಲಾಪ ಮಾಡಿದೆ.”
“ಗೋತಮ, ಅಂಬಟ್ಠನೊಂದಿಗೆ ಏನೇನ್ನು ಕುರಿತು ಸಲ್ಲಾಪ ಮಾಡಿದೆ?”
ಆಗ ಭಗವಾನರು ಯುವಕ ಅಂಬಟ್ಠನೊಂದಿಗೆ ಏನೇನನ್ನು ಮಾತನಾಡಿದ್ದರೋ ಅವೆಲ್ಲವನ್ನು ಪೋಕ್ಖರಸಾತಿ ಬ್ರಾಹ್ಮಣನಿಗೆ ಹೇಳಿದರು. ಅದನ್ನು ಕೇಳಿದ ಪೋಕ್ಖರಸಾತಿ ಬ್ರಾಹ್ಮಣನು ಭಗವಾನರಿಗೆ ಹೀಗೆ ಹೇಳಿದನು “ಗೋತಮ, ಯುವಕ ಅಂಬಟ್ಠನು ಮೂಢ, ಗೋತಮನು ಯುವಕ ಅಂಬಟ್ಠನಿಗೆ ಕ್ಷಮೆ ನೀಡಲಿ.”
“ಬ್ರಾಹ್ಮಣ, ಯುವಕ ಅಂಬಟ್ಠನು ಸುಖವಾಗಿರಲಿ.”
ಪೋಕ್ಖರಸಾತಿಯು ಭಗವಾನರ ಶರೀರದಲ್ಲಿನ ಮೂವತ್ತೆರಡು ಮಹಾಪುರುಷ ಲಕ್ಷಣಗಳನ್ನು ಹುಡುಕಿದನು. ಅವನು ಎರಡು ಹೊರತು ಉಳಿದೆಲ್ಲ ಮಹಾಪುರುಷ ಲಕ್ಷಣಗಳನ್ನು ಭಗವಾನರ ದೇಹದ ಮೇಲೆ ಕಂಡನು. ಉಳಿದೆರಡು ಮಹಾಪುರುಷ ಲಕ್ಷಣಗಳ ಅಂದರೆ ಕೋಶದಿಂದ ಆವೃತವಾದ ಗುಪ್ತವಸ್ತು ಮತ್ತು ದೊಡ್ಡನಾಲಿಗೆ ಬಗೆಗೆ ಅವನು ಇನ್ನೂ ಸಂಶಯದಿಂದಿದ್ದನು.
ಆಗ ಭಗವಾನರು ಹೀಗೆಂದುಕೊಂಡರು- “ಈ ಪೋಕ್ಖರಸಾತಿ ಬ್ರಾಹ್ಮಣನು ಎರಡನ್ನು ಬಿಟ್ಟು ನನ್ನಲ್ಲಿರುವ ಮೂವತ್ತೆರಡು ಲಕ್ಷಣಗಳನ್ನು ನೋಡಿದ್ದಾನೆ. ಈ ಎರಡು ಮಹಾಪುರುಷ ಲಕ್ಷಣಗಳ ಅಂದರೆ ಕೋಶದಿಂದ ಆವೃತವಾಗಿರುವ ಗುಹ್ಯವಸ್ತು ಮತ್ತು ದೊಡ್ಡ ನಾಲಿಗೆ ಬಗೆಗೆ ಸಂಶಯಪಡುತ್ತಿದ್ದಾನೆ. ಅತೃಪ್ತಿಯಿಂದಿದ್ದಾನೆ, ನಿರ್ಧಾರಕ್ಕೆ ಬರಲಾರದವನಾಗಿದ್ದಾನೆ”. ಆಗ ಭಗವಾನರು ಋದ್ಧಿಶಕ್ತಿಯಿಂದ ತಮ್ಮ ಪ್ರತಿರೂಪವನ್ನು ತೋರಿಸಿದರು. ಪೋಕ್ಖರಸಾತಿ ಬ್ರಾಹ್ಮಣನು ಕೋಶದಲ್ಲಿ ಆವೃತವಾದ ಗುಹ್ಯ ವಸ್ತುವನ್ನು ನೋಡಿದನು. ಆಮೇಲೆ ಭಗವಾನರು ತಮ್ಮ ನಾಲಿಗೆಯನ್ನು ಹೊರಕ್ಕೆ ತಂದು ಎರಡು ಕಿವಿಗಳಿಗೂ ಮುಟ್ಟಿಸಿದರು. ಎರಡು ಮೂಗಿನ ಹೊಳ್ಳೆಗಳಿಗೂ ಮುಟ್ಟಿಸಿದರು. ಲಲಾಟ (ಹಣೆ) ಮಂಡಲದ ಸುತ್ತಲೂ ತಂದರು.
ಆಗ ಪೋಕ್ಖರಸಾತಿ ಬ್ರಾಹ್ಮಣನಿಗೆ ಹೀಗೆನ್ನಿಸಿತು “ಸಮಣಗೋತಮನು ಮೂವತ್ತೆರಡು ಮಹಾಪುರುಷ ಲಕ್ಷಣಗಳಿಂದ ಪರಿಪೂರ್ಣನಾಗಿದ್ದಾನೆ. ಅಪೂರ್ಣವಾಗಿಲ್ಲ.” ಆಮೇಲೆ ಭಗವಾನರನ್ನು ಕುರಿತು ಹೀಗೆಂದನು “ಗೋತಮನು ಭಿಕ್ಷು ಸಂಘದೊಂದಿಗೆ ನಾಳೆ ನಮ್ಮಲ್ಲಿಗೆ ಊಟಕ್ಕೆ ಬರುವವನಾಗಬೇಕು” ಭಗವಾನರು ಮೌನದಿಂದ ಆಹ್ವಾನವನ್ನು ಅಂಗಿಕರಿಸಿದರು.
ಅನಂತರ ಪೋಕ್ಖರಸಾತಿ ಬ್ರಾಹ್ಮಣನು ಭಗವಾನರು ವಾಸಿಸುತ್ತಿದ್ದ ಕಡೆಗೆ ಹೋಗಿ ಅವರಿಗೆ ಕಾಲವನ್ನು ತಿಳಿಸಿದನು. “ಗೋತಮ, ಕಾಲವಾಯಿತು. ಊಟವು ಸಿದ್ದವಾಗಿದೆ” ಎಂದನು. ಪೂರ್ವಾಹ್ನ ಸಮಯದಲ್ಲಿಯೇ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿದ್ದ ಭಗವಾನರು ಪಾತ್ರೆ ಚೀವರಗಳ ಸಮೇತ ಭಿಕ್ಷು ಸಂಘದೊಡನೆ ಆ ಬ್ರಾಹ್ಮಣ ಪೋಕ್ಖರಸಾತಿಯ ಮನೆಗೆ ಹೋದರು. ಪ್ರತ್ಯೇಕವಾಗಿ ಏರ್ಪಡಿಸಿದ್ದ ಆಸನದ ಮೇಲೆ ಕುಳಿತರು. ಪೋಕ್ಖರಸಾತಿಯು ಭಗವಾನರಿಗೂ ಯುವಕ ಭಿಕ್ಷು ಸಂಘಕ್ಕೂ ಉತ್ತಮವಾದ ರುಚಿ ರುಚಿಯಾದ ಪದಾರ್ಥಗಳನ್ನು ತನ್ನ ಕೈಯಿಂದಲೇ ಸಂತರ್ಪಿಸಿ ಅವರನ್ನು ತೃಪ್ತಿಪಡಿಸಿದನು. ಭಗವಾನರು ಊಟವನ್ನು ಮುಗಿಸಿ ಪಾತ್ರೆಯನ್ನು ತೊಳೆದು ತಮ್ಮ ಕೈಯನ್ನು ತೊಳೆದುಕೊಂಡ ಮೇಲೆ ಅವರ ಮಗ್ಗುಲಲ್ಲಿ ಬಂದು ತಗ್ಗಾದ ಪೀಠದ ಮೇಲೆ ಕುಳಿತನು.
ಕುಳಿತುಕೊಂಡಿದ್ದ ಪೋಕ್ಖರಸಾತಿ ಬ್ರಾಹ್ಮಣನಿಗೆ ಭಗವಾನರು ಹೇಳಬೇಕಾದ್ದನ್ನು ಸರಿಯದ ಕ್ರಮದಲ್ಲಿ ಹೇಳಿದರು. ಹೇಗೆಂದರೆ, ದಾನಕಥೆ, ಶೀಲಕಥೆ, ಸ್ವರ್ಗಕಥೆ, ಕಾಮಗಳಿಂದ ಆಗುವ ಆಪಾಯ; ಕ್ಲೇಶದಿಂದ ಉಂಟಾಗುವ ಅಹಂಕಾರ ನೈಷ್ಕರ್ಮದಲ್ಲಿರುವ ಲಾಭ ಈ ಕ್ರಮದಲ್ಲಿ ಹೇಳಿ ಅವುಗಳನ್ನು ಸ್ವಷ್ಟಪಡಿಸಿದರು. ಭಗವಾನರು ಪೋಕ್ಖರಸಾತಿ ಬ್ರಾಹ್ಮಣನು ಸಂಸ್ಕಾರಗೊಂಡ ಚಿತ್ತವನ್ನೂ, ಮೃದುಚಿತ್ತವನ್ನೂ ವಿನಿವಾರಣ ಚಿತ್ತವನ್ನೂ (ನೇವರಣಗಳಿಂದ ಮುಕ್ತವಾದ ಚಿತ್ತ) ಉದಗಚಿತ್ತವನ್ನೂ (ಎಚ್ಚರಗೊಂಡ ಚಿತ್ತ) ಪ್ರಸನ್ನ ಚಿತ್ತವನ್ನೂ ಪಡೆದಿರುವನೆಂದು ತಿಳಿದ ಮೇಲೆ ಬುದ್ಧನು ತಮ್ಮ ಸಾಧನೆಯಿಂದಲೇ ಗಳಿಸಿರುವ ಧರ್ಮವನ್ನು ಬೋಧಿಸಿದರು. ದು:ಖ ಸತ್ಯ ಸಮುದಯ ಸತ್ಯ ನಿರೋಧ ಸತ್ಯ ಮತ್ತು ಮಾರ್ಗ ಸತ್ಯಗಳನ್ನು ಪ್ರಕಾಶಗೊಳಿಸಿದರು. ಕೊಳೆಯಿಂದ ಕೂಡಿದ ಬಟ್ಟೆಯನ್ನು ಚೆನ್ನಾಗಿ ತೊಳೆದ ಮೇಲೆ ಅದು ಯಾವ ಬಣ್ಣವನ್ನು ಬೇಕಾದರೂ ಹೀರಿಕೊಳ್ಳುವಂತೆ ಪೋಕ್ಖರಸಾತಿ ಬ್ರಾಹ್ಮಣನು ಆಸನದ ಮೇಲೆ ಕುಳಿತಂತೆಯೇ ಶುದ್ಧವಾದ ಧರ್ಮಚಕ್ಷುವನ್ನು ಪಡೆದನು. “ ಹುಟ್ಟಿ ಬರುವುದೆಲ್ಲಕ್ಕೂ ಅಂತ್ಯವಿದ್ದೇ ಇದೆ” ಎಂದು ತಿಳಿಸಿದನು.
ಪೋಕ್ಖರಸಾತಿ ಧರ್ಮವನ್ನು ತಿಳಿದು ಶರಣು ಹೋಗುವುದು
ಧರ್ಮವನ್ನು ನೋಡಿದವನೂ(ದೃಷ್ಟಿ ಧರ್ಮ) ಧರ್ಮವನ್ನೂ ತಿಳಿದವನೂ ಧರ್ಮವನ್ನೂ ಅರ್ಥ ಮಾಡಿಕೊಂಡಿರುವವನೂ ಧರ್ಮದ ಆಳ ಅಗಲಗಳನ್ನು ತಿಳಿದು ಅದನ್ನು ಪಾಲಿಸುವವನೂ (ಪರಿಯೋಗಲ್ಹ ಧಮ್ಮೋ) ಸಂಶಯಗಳೆಲ್ಲವನ್ನೂ ನಿವಾರಿಸಿಕೊಂಡಿರುವವನೂ ತಲ್ಲಣಿಕೆಯನ್ನು ಗೆದ್ದವನೂ ಆತ್ಮ ವಿಶ್ವಾಸವನ್ನು ಗಳಿಸಿದವನೂ ಶ್ರೇಷ್ಠವಾದ ಧರ್ಮವನ್ನು ತಿಳಿಯಲು ಪರರನ್ನು ಅವಲಂಬಿಸಿದವನೂ ಆದ ಪೋಕ್ಖರಸಾತಿಯು ಭಗವಾನರನ್ನು ಕುರಿತು ಹೀಗೆಂದನು: “ಗೋತಮ, ಎಷ್ಟು ಕಾಂತಿಯುಕ್ತವಾಗಿವೆ ನಿಮ್ಮ ಮಾತುಗಳು! ಎಂಥ ಕಾಂತಿಯುಕ್ತವಾಗಿವೆ! ತಲೆಕೆಳಗಾಗಿ ಬಿದ್ದಿರುವುದನ್ನು ನೆಟ್ಟಗೆ ನಿಲ್ಲಿಸುವವನಂತೆ ಅಡಗಿರುವುದನ್ನು ಹೊರಗೆಳೆದು ತೋರಿಸುವವನಂತೆ ದಾರಿತಪ್ಪಿದವನಿಗೆ ಮಾರ್ಗವನ್ನು ತೋರಿಸುವವನಂತೆ, ಕತ್ತಲೆಯಲ್ಲಿರುವವನಿಗೆ ಪಂಜನ್ನು ಹಿಡಿದವನಂತೆ, ಅನೇಕ ಪರಿಯಲ್ಲಿ ಧರ್ಮವನ್ನು ಪ್ರಕಾಶಗೊಳಿಸದ್ದೀರಿ. ಕಣ್ಣಿರುವವನು ರೂಪಗಳನ್ನು ನೋಡುವಂತೆ ಈ ಪ್ರವಚನದಿಂದ ನಾನು ಧರ್ಮವನ್ನು ನೋಡಬಲ್ಲವನಾಗಿದ್ದೇನೆ. ಗೋತಮ, ಪುತ್ರರೊಂದಿಗೆ ಭಾರ್ಯೆಯೊಂದಿಗೆ ಪರಿವಾರದೊಂದಿಗೆ ಸಮಸ್ತರೊಂದಿಗೆ ಭಗವಂತನಾದ ಗೋತಮನಿಗೆ ಶರಣು ಹೋಗುತ್ತೇನೆ. ಧರ್ಮಕ್ಕೆ ಶರಣು ಹೋಗುತ್ತೇನೆ. ಭಿಕ್ಷು ಸಂಘಕ್ಕೆ ಶರಣು ಹೋಗುತ್ತೇನೆ. ಪ್ರಾಣವಿರುವವರೆಗೆ ಶರಣಾಗತನಾದ ನನ್ನನ್ನು ಈ ದಿನದಿಂದಲೇ ಗೋತಮನು ಉಪಾಸಕನನ್ನಾಗಿ ಸ್ವೀಕರಿಸಲಿ. ಗೋತಮನು ಉಕ್ಖಟ್ಠದ ಬೇರೆ ಉಪಾಸಕರಲ್ಲಿಗೆ ಹೋಗುವಂತೆ ಪೋಕ್ಖರಸಾತಿಯ ಜನರಲ್ಲಿಗೂ ಹೋಗಲಿ. ಭಗವಂತ ಗೋತಮನನ್ನು ನಮಸ್ಕರಿಸುವಂತೆ ಅಥವಾ ಅವರು ಬಂದಾಗ ಎದ್ದು ನಿಲ್ಲುವ ಅಥವಾ ಆಸನವನ್ನು ಉದಕವನ್ನು ಕೊಟ್ಟು ಆದರಿಸುವ ಅವರನ್ನು ನೋಡಿದಾಗ ಪ್ರಸನ್ನ ಚಿತ್ತವನ್ನು ಪಡೆಯುವ ಯುವಕ ಯುವತಿಯರೆಲ್ಲರಿಗೂ ದೀರ್ಘ ಕಾಲದವರೆಗೆ ಸುಖ ದೊರೆಯಲಿ ಹಿತವುಂಟಾಗಲಿ.”
“ಕಲ್ಯಾಣವಾದುದನ್ನು ಹೇಳಿದೆ, ಬ್ರಾಹ್ಮಣ.”
ಇಲ್ಲಿಗೆ ಅಂಬಟ್ಠ ಸುತ್ತ ಮುಗಿಯಿತು.
ಅಂಬಟ್ಠಸುಟ್ಟ